ಮನೆ ಕ್ರೀಡೆ ಮಾಲ್ಡೀವ್ಸ್ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ: ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್ ಸ್ಟಾರ್ ಗಳು ಕಿಡಿಕಾರಿದ್ದಾರೆ

ಮಾಲ್ಡೀವ್ಸ್ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ: ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್ ಸ್ಟಾರ್ ಗಳು ಕಿಡಿಕಾರಿದ್ದಾರೆ

0

ನವದೆಹಲಿ: ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳಿಂದ ಭಾರತ ವಿರೋಧಿ ಹೇಳಿಕೆ ವಿರುದ್ಧ ಭಾರತದ ಕ್ರಿಕೆಟ್ ಹಾಗೂ ಬಾಲಿವುಡ್ ಸ್ಟಾರ್ ಗಳು ಕಿಡಿಕಾರಿದ್ದಾರೆ.

ಮಾಜಿ ಟೀಂ ಇಂಡಿಯಾ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಅನಗತ್ಯ ಹೇಳಿಕೆ ಹಿನ್ನೆಲೆಯಲ್ಲಿ ಉಡುಪಿ, ಅಂಡಮಾನ್ ಬೀಚ್ ಮತ್ತಿತರ  ಸುಂದರ ಬೀಚ್ ಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ವದೇಶಿ ಬೀಚ್ ಗಳ ಅಭಿವೃದ್ಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದ್ದು, ಸಚಿನ್ ತೆಂಡೊಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತಿತರರು ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉಡುಪಿಯ ಮರವಂತೆ, ಪೊಂಡಿಯ ಪ್ಯಾರಡೈಸ್, ಅಂಡಮಾನ್‌ನ ನೀಲ್ ಮತ್ತು ಹ್ಯಾವ್‌ಲಾಕ್ ಬೀಚ್ ಗಳ ಫೋಟೋಗಳನ್ನು ಹಂಚಿಕೊಂಡಿರುವ ಸೆಹ್ವಾಗ್, ದೇಶದಲ್ಲಿ ಅನ್ವೇಷಿಸದ ಹಲವಾರು ಸ್ಥಳಗಳಿದ್ದು, ಮೂಲಸೌಕರ್ಯ ಒದಗಿಸುವುದರೊಂದಿಗೆ ಅವುಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ವಿರೇಂದ್ರ ಸೆಹ್ವಾಗ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಇದು ತುಂಬಾ ಪ್ರಸ್ತುತವಾಗಿದೆ ಮತ್ತು ನಮ್ಮದೇ ಅತ್ಯಂತ ಉತ್ತಮವಾಗಿದೆ. ಲಕ್ಷದ್ವೀಪ ಮತ್ತು ಅಂಡಮಾನ್‌ಗಳಿಗೆ ಹೋಗಿದ್ದು, ಅವುಗಳು ಆಶ್ಚರ್ಯಕರವಾದ ಸುಂದರವಾದ ಸ್ಥಳಗಳಾಗಿವೆ. ಬೆರಗುಗೊಳಿಸುವ  ಕಡಲತೀರಗಳು ಮತ್ತು ನೀರೊಳಗಿನ ಅನುಭವವು ನಂಬಲಾಗದ್ದು ಎಂದಿದ್ದಾರೆ.

ಸಚಿನ್ ತೆಂಡೊಲ್ಕರ್ ಟ್ವೀಟ್:

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಮಹಾರಾಷ್ಟ್ರದ ಕರಾವಳಿ ತೀರ ಪ್ರದೇಶ ಸಿಂಧುದುರ್ಗ ಬೀಚ್ ನಲ್ಲಿ ಕ್ರಿಕೆಟ್ ಆಡುವ ಪೋಟೋ ಹಂಚಿಕೊಳ್ಳುವ ಮೂಲಕ ಅದರ ಪ್ರಾಮುಖ್ಯತೆ ಕುರಿತು ವಿವರಿಸಿದ್ದಾರೆ. ಭಾರತದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್, ಸುರೇಶ್ ರೈನಾ ಮತ್ತಿತರರು ಮಾಲ್ಡೀವ್ಸ್ ವಿರುದ್ಧ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಅವರು ಜನವರಿ 2 ರಂದು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು ಮತ್ತು ಸ್ನಾರ್ಕೆಲಿಂಗ್‌ನಲ್ಲಿ ಕೈ ಪ್ರಯತ್ನಿಸಿದ ನಂತರ ‘ಉಲ್ಲಾಸದಾಯಕ ಅನುಭವ’ ಸೇರಿದಂತೆ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.