ಬೆಂಗಳೂರು/ಮೈಸೂರು (Bengaluru)/(Mysuru)–ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆಯನ್ನು “ಚೋಟಾ ಪಾಕಿಸ್ತಾನ” ಎಂದು ಬಣ್ಣಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಕವಲಂದೆಯನ್ನು “ಚೋಟಾ ಪಾಕಿಸ್ತಾನ” ಎಂದು ಬಣ್ಣಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುತ್ತೇನೆ ಎಂದಿದ್ದಾರೆ.
ಕಳೆದ ಮಂಗಳವಾರ ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಮುಗಿಸಿ ಹೊರ ಬರುವ ವೇಳೆ “ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ” ಎಂಬ ಆಡಿಯೋ ಹೊಂದಿರುವ ವಿಡಿಯೋ ರೆಕಾರ್ಡ್‍ವೊಂದು ಇದೀಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರ ಎಲ್ಲರೂ ಒಂದೆಡೆ ಸೇರಿದ್ದರು. ಎಲ್ಲರೂ ರಸ್ತೆ ಬದಿಯಲ್ಲಿ ನಿಂತಿದ್ದು, ಅವರು “ನಾರಾ ಇ ತಕ್ಬೀರ್ ಅಲ್ಲಾಹು ಅಕ್ಬರ್” ಎಂದು ಕೂಗುವುದನ್ನು ಕೇಳಬಹುದು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದು, ದೃಶ್ಯ ಸೆರೆ ಹಿಡಿಯುವಾಗ ಆ ವ್ಯಕ್ತಿ ಕೌಲಂದೆ ಗ್ರಾಮ ಚೋಟಾ ಪಾಕಿಸ್ತಾನ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.