ಮನೆ ಸ್ಥಳೀಯ ಕ್ರೈಸ್ತ ಸಮುದಾಯದ ಧರ್ಮಾಧ್ಯಕ್ಷ ಕೆ.ಎಂ.ವಿಲಿಯಮ್ ಕೊಲೆಗೆ ಸಂಚು: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

ಕ್ರೈಸ್ತ ಸಮುದಾಯದ ಧರ್ಮಾಧ್ಯಕ್ಷ ಕೆ.ಎಂ.ವಿಲಿಯಮ್ ಕೊಲೆಗೆ ಸಂಚು: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್

0

ಮೈಸೂರು: ಮೈಸೂರು ಪ್ರಾಂತ್ಯದ ಕ್ರೈಸ್ತ ಸಮುದಾಯದ ಧರ್ಮಾಧ್ಯಕ್ಷ ಕೆ.ಎಂ.ವಿಲಿಯಮ್ ಅವರನ್ನು ಕೊಲೆ ಮಾಡಲು ಸುಪಾರಿ ಕೊಡುವುದಾಗಿ ಫಾದರ್ ಜ್ಞಾನಪ್ರಕಾಶ್ ಮತ್ತು ಇತರ ಆರು ಮಂದಿ ಸಂಚು ರೂಪಿಸಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆ.ಎಂ.ವಿಲಿಯಮ್ ಅವರು ಬದುಕಿದ್ದಾರೊ ಇಲ್ಲವೊ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಕ್ರೈಸ್ತ ಸಮುದಾಯದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜಮಾಯಿಸಿದ ಕ್ರೈಸ್ತ ಮುಖಂಡರುಗಳು ಪ್ರಭಾರ ಆಡಳಿತಾಧಿಕಾರಿಯಾಗಿರುವ ನಿವೃತ್ತ ಬಿಷಪ್ ಬರ್ನಾಡ್ ಮೋರಸ್ ಅವರಿಗೆ ಬಿಷಪ್ ಕೆ.ಎಂ.ವಿಲಿಯಮ್ ಅವರ ಹತ್ಯೆಗೆ ಸಂಚು ರೂಪಿಸಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಇದೇ ವೇಳೆ ಕ್ರೈಸ್ತ ಮುಖಂಡ ಮ್ಯಾಥ್ಯು ಸುರೇಶ್ ಮಾತನಾಡಿ, ಬಿಷಪ್ ಕೆ.ಎಂ.ವಿಲಿಯಮ್ ಅವರು ಧರ್ಮಾಧ್ಯಕ್ಷರಾದ ಮೇಲೆ ಪ್ರಾಮಾಣಿಕವಾಗಿ ಸಂಸ್ಥೆಯ ಹಣಕಾಸಿನ ವಹಿವಾಟು ನಡೆಸಲು ಪ್ರಾರಂಭ ಮಾಡಿದರು. ಪ್ರತಿಯೊಂದು ವ್ಯವಹಾರದಲ್ಲಿ ಬಡ್ಜೆಟ್ ಪದ್ಧತಿ ತಂದರು. ಹಣಕಾಸಿನ ವ್ಯವಹಾರದಲ್ಲಿ ದ್ವಿ ಸಹಿ ನೀತಿಯನ್ನು ಜಾರಿಗೆ ತಂದು ಹಣ ಸೋರಿಕೆಯನ್ನು ತಡೆಗಟ್ಟಿದರು.

ಇದರಿಂದ ಕೆಲವು ಪಾದ್ರಿಗಳ ಆಡಂಬರ ಜೀವನಕ್ಕೆ ತೊಂದರೆಯಾಯಿತು. ಕುಪಿತಗೊಂಡ ಕೆಲವು ದುಷ್ಕರ್ಮಿಗಳು ಪ್ರಚೋದನೆಗೆ ಒಳಗಾಗಿ ವಿಶ್ವಾಸಿಗಳ ಭಕ್ತಿಯನ್ನು ಕದಡುವ ಹಾಗೂ ಪ್ರಾಮಾಣಿಕ ಹಾಗೂ ಆರ್ಥಿಕ ಸುಧಾರಕರಾದ ಬಿಷಪ್ಕೆ.ಎಂ.ವಿಲಿಯಮ್ ಅವರ ವಿರುದ್ಧ ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದರು. ಬಿಷಪ್ ಕೆ.ಎಂ.ವಿಲಿಯಮ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ ನಿವೃತ್ತ ಬಿಷಪ್ ಬರ್ನಾಡ್ ಮೋರಸ್ ಅವರನ್ನು ಪ್ರಭಾರ ಆಡಳಿತಾಧಿಕಾರಿಯನ್ನಾಗಿ ಮಾಡಿ ಒಂದು ವರ್ಷ ಆಯಿತು.ಇದುವರೆಗೂ ಬಿಷಪ್ ಕೆ.ಎಂ.ವಿಲಿಯಮ್ ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಇದೀಗ ಜನವರಿ ೬ ರಂದು ಜ್ಞಾನಪ್ರಕಾಶ್ ಮತ್ತು ಇತರರು ದೂರವಾಣಿ ಮೂಲಕ ಮಾತನಾಡಿ ಕೆ.ಎಂ.ವಿಲಿಯಮ್ ಅವರನ್ನು ಗನ್ ತೆಗೆದುಕೊಂಡು ಸುಟ್ಟುಹಾಕಿ ಬಿಡೋಣ ಇಲ್ಲದಿದ್ದರೆ ಸುಪಾರಿ ಕೊಟ್ಟಾದರು ಅತನನ್ನು ಕೊಲೆ ಮಾಡಿಸೋಣ ಎಂಬ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಸಾವಿರಾರು ಮಂದಿಗೆ ಕೆ.ಎಂ.ವಿಲಿಯಮ್ ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಈ ಎಲ್ಲಾ ಸಂಚುಗಳನ್ನು ಗಮನಿಸಿದರೆ ಕೆ.ಎಂ.ವಿಲಿಯಮ್ ಜೀವಂತವಾಗಿದ್ದಾರೊ ಇಲ್ಲವೊ ಎಂಬುದು ನಮಗೆಲ್ಲರನ್ನು ಕಾಡುತ್ತಿದೆ. ಅವರನ್ನು ಮತ್ತೆ ಮೈಸೂರು ಪ್ರಾಂತ್ಯಕ್ಕೆ ಕರೆತರುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.

ಬಿಷಪ್ ಕೆ.ಎಂ.ವಿಲಿಯಮ್ ಅವರ ಮೇಲೆ ಕೊಲೆ ಸಂಚು ರೂಪಿಸಿರುವ ಫಾದರ್ ಗಳಾದ ಜ್ಞಾನಪ್ರಕಾಶ್, ಆಂತೋಣಿ ರಾಜ್, ಪ್ರವೀಣ್, ರೋಹನ್ ಸೇರಿ ಇತರರ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದೆ ನಾಗರಿಕರೊಡಗೂಡಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.