ಅಯೋಧ್ಯೆ/ನವದೆಹಲಿ: ಭವ್ಯ ರಾಮಮಂದಿರದ ಉದ್ಘಾಟನೆ ಜನವರಿ 22ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ 150ಕ್ಕೂ ಅಧಿಕ ಸಿಐಎಸ್ ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಅನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ.
ಅಯೋಧ್ಯೆಧಾಮ್ ನ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ 68ನೇ ನಾಗರಿಕ ವಿಮಾನ ನಿಲ್ದಾಣವಾಗಿದ್ದು, ಇದು ಕೇಂದ್ರದ ವಿಶೇಷ ವಾಯುಯಾನ ಭದ್ರತಾ ಗ್ರೂಪ್ (ಎಎಸ್ ಜಿ) ಅಡಿ ಬರಲಿದೆ ಎಂದು ವರದಿ ತಿಳಿಸಿದೆ.
2023ರ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್), ಭಯೋತ್ಪಾದಕ ನಿಗ್ರಹ ಹಾಗೂ ವಿಧ್ವಂಸಕ ನಿಗ್ರಹ ಕಾರ್ಯವನ್ನು ನಿರ್ವಹಿಸಲಿದೆ.
ಅಲ್ಲದೇ ಸಿಐಎಸ್ ಎಫ್ ಪ್ರಯಾಣಿಕರು ಹಾಗೂ ಅವರ ಲಗೇಜ್ ಗಳನ್ನು ಕೂಡಾ ಪರಿಶೀಲಿಸುವ ಕಾರ್ಯ ನಡೆಸಲಿದೆ. ಡೆಪ್ಯುಟಿ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ 150ಕ್ಕೂ ಅಧಿಕ ಸಿಐಎಸ್ ಎಫ್ ಸಿಬಂದಿಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.