ಶಿರಸಿ: ರಾಮ ಮಂದಿರ ಸಮಸ್ತ ಹಿಂದೂ ಸಮಾಜದ ಮಂದಿರ. ಬಿಜೆಪಿ ಅಥವಾ ಸರಕಾರದ ಮಂದಿರವಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ಕೇವಲ ದೇವಾಲಯದ ಉದ್ಘಾಟನೆ ಅಲ್ಲ ಬದಲಾಗಿ ಹಿಂದೂಗಳ ಮಹಾ ಶಕ್ತಿ ಅನಾವರಣ ಎಂದು ಹೇಳಿದರು.
ರಾಮ ಮಂದಿರ ವಿಚಾರವನ್ನು ರಾಜಕೀಕರಣಗೊಳಿಸಬಾರದು. ಧರ್ಮ ಮತ್ತು ಸಂಸ್ಕೃತಿ ರಾಜಕೀಯ ರೇಖೆ ಮೀರಿದ್ದು. ರಾಮ ಭಕ್ತರಿಗೆ ಎಲ್ಲರಿಗೂ ಆಹ್ವಾನವಿದೆ. ಆಹ್ವಾನ ಬಂದೇ ಹೋಗಬೇಕಿಲ್ಲ. ಆಹ್ವಾನ ಬರುವ ತನಕ ಬಂದಿಲ್ಲ ಎನ್ನುವದು, ಬಂದ ಬಳಿಕ ಹೋಗುವದಿಲ್ಲ ಎನ್ನುವುದು ಹೀಗೆ ಡೊಂಬರಾಟ ಮಾಡಬಾರದು ಎಂದು ಹೇಳಿದರು.
ಶತಮಾನಗಳ ಇತಿಹಾಸಕ್ಕೆ ಭವ್ಯ ಗೆಲುವು ಸಿಕ್ಕಿದೆ. ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಅತ್ಯಾಚಾರ ಬದಲಾಗಿ ಸಮಾಜ ಎದ್ದು ನಿಂತಿದೆ. ಹಿಂದೂ ಸಮಾಜ ಸಾತ್ವಿಕ ಶಕ್ತಿ ಅನಾವರಣವಾಗುತ್ತಿದೆ. ಒಂದು ಸಮಾಜ ಹೇಗೆ ನಿಲ್ಲುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಪ್ರತ್ಯಕ್ಷ, ವೈಚಾರಿಕ ಸಂಘರ್ಷ ಎಲ್ಲವನ್ನೂ ಮೆಟ್ಟಿ ನಿಂತ ಘಟಕ ಎಂದರು.
ದೇಶದ ಪರಂಪರೆ, ಸಂಸ್ಕೃತಿ, ಧರ್ಮ, ಇತಿಹಾಸದ ಆಳವಾದ ನಂಬಿಕೆ ಇದ್ದವರಿಗೆ ಇದೊಂದು ಸಮಾರೋಹ. ಈ ಸಮಾಜ ಮೇಲೆ ಸ್ವಂತ ಶಕ್ತಿಯ ಮೇಲೆ ಎದ್ದು ನಿಂತಿದೆ ಎಂದು ಹೇಳಿದರು.