ಮನೆ ರಾಜ್ಯ ಪಿಎಸ್‌ ಐ ಹಗರಣ: ಹೈಕೋರ್ಟ್‌ ಮೊರೆಹೋದ 2 ಆರೋಪಿಗಳು

ಪಿಎಸ್‌ ಐ ಹಗರಣ: ಹೈಕೋರ್ಟ್‌ ಮೊರೆಹೋದ 2 ಆರೋಪಿಗಳು

0

ಬೆಂಗಳೂರು (Bengaluru)- ಪಿಎಸ್‌ ಐ ನೇಮಕಾತಿ ಹಗರಣದ ಇಬ್ಬರು ಆರೋಪಿಗಳು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್‌ ಮೊರೆಹೋಗಿದ್ದಾರೆ.

ಹಗರಣದ 22 ಆರೋಪಿಗಳ ಪೈಕಿ ಆರೋಪಿಗಳಾದ ಎಸ್.ಜಾಗೃತ್ ಹಾಗೂ ರಚನಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ.

ಅಲ್ಲದೆ, ಈ ಅರ್ಜಿ ನ್ಯಾಯಾಲಯದಿಂದ ಇತ್ಯರ್ಥಪಡಿಸುವರೆಗೂ ಪ್ರಕರಣ ಕುರಿತ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ. ಸಿಐಡಿ ಪೊಲೀಸ್ ಅಧಿಕಾರಿ ನರಸಿಂಹ ಮೂರ್ತಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಅವರೇ ತನಿಖಾ ತಂಡದಲ್ಲಿ ಸಹಕಾಯಕ ತನಿಖಾಧಿಕಾರಿಯಾಗಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಮೇಲ್ವಿಚಾರಕರು ಮತ್ತು ವಿಚಕ್ಷಣಾ ಸ್ಕ್ವಾಡ್ ಪರೀಕ್ಷಾ ಕೇಂದ್ರದ ಮೇಲೆ ನಿಗಾಯಿಟ್ಟಿದ್ದರು. ಇಂತಹ ಸಂದರ್ಭದಲ್ಲಿ ಪರಿಕ್ಷಾ ಕೇಂದ್ರದಲ್ಲಿ ಯಾವುದೇ ರೀತಿ ನಕಲು ಹಾಗೂ ಅಕ್ರಮ ನಡೆಯಲು ಸಾಧ್ಯವಿಲ್ಲ. ಪರೀಕ್ಷೆ ನಡೆದು ಬಹುತೇಕ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟಗೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಕೆಎಟಿ ಮೊರೆ ಹೋದ ಪಿಎಸ್‌ಐ ಅಭ್ಯರ್ಥಿಗಳು:

ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಕೇಳಿಬಂದಿಲ್ಲ ಮತ್ತು ಸಾಕ್ಷ್ಯಾಧಾರಗಳೂ ಇಲ್ಲ. ಆದರೂ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಈ ಅರ್ಜಿಗಳು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ರಜಾಕಾಲದ ಏಕ ಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದವು. ಕೆಲಕಾಲ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮೇ 19ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.