ಮನೆ ರಾಜ್ಯ ರಾಮಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ

ರಾಮಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ

0

ಮಂಗಳೂರು(ದಕ್ಷಿಣ ಕನ್ನಡ): ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಮಂದಿರದ ಅಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರು ಎನ್ನಲಾದ ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆದಿದೆ.

ಸಂತೋಷ್ ಎಂಬಾತ ಹಲ್ಲೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಎಂದು ಗುರುತಿಸಲಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೋಷ್ ಮುಂಡೂರು ಗ್ರಾಮದಲ್ಲಿ ರಾಮಮಂದಿರದ ಅಕ್ಷತೆ ಹಂಚುವ ಜವಾಬ್ದಾರಿ ಹೊತ್ತಿದ್ದರು. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳಾದ ಪುತ್ತಿಲ ಪರಿವಾರದ ಬೆಂಬಲಿಗರು ಎನ್ನಲಾದ ಧನಂಜಯ್ ಮತ್ತು ತಂಡ ವಿರೋಧ ವ್ಯಕ್ತಪಡಿಸಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಅದೇ ದ್ವೇಷದಲ್ಲಿ ಸಂತೋಷ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತಡೆಯಲು ಬಂದ ಸಂತೋಷ ತಾಯಿಯ ಮೇಲೂ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಸಂತೋಷ್ ಹಾಗೂ ಅವರ ತಾಯಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಅವರು ಇದೊಂದು ರಾಜಕೀಯ ಪ್ರೇರಿತ ಹಲ್ಲೆಯಾಗಿದ್ದು, ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸುವಂತೆ ಸರಕಾರ ಮತ್ತು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದರು. ಘಟನೆ ಕುರಿತಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.