ಚಂಡೀಗಢ: ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಬರೆಯಲು ತನ್ನ ಪ್ರಿಯತಮೆಯಂತೆ ಸೋಗು ಹಾಕಿಕೊಂಡು ಆಗಮಿಸಿದ್ದ ಪ್ರಿಯಕರನೊಬ್ಬ ಪರೀಕ್ಷಾ ಕೇಂದ್ರದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಪಂಜಾಬ್ ನ ಫರೀದ್ ಕೋಟ್ ನಲ್ಲಿ ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರೋಗ್ಯ ಕಾರ್ಯಕರ್ತರ ನೇಮಕಕ್ಕಾಗಿ ಜ.7ರಂದು ಪರೀಕ್ಷೆ ಆಯೋಜಿಸಿತ್ತು.
ಪರಮ್ ಜಿತ್ ಕೌರ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಳು. ಕೊಟಕ್ ಪುರದ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರವಿತ್ತು. ತನ್ನ ಪ್ರಿಯತಮೆ ನೇಮಕವಾಗುವಂತೆ ಸಹಾಯ ಮಾಡಲು, ಅಂಗ್ರೇಜ್ ಸಿಂಗ್ ಸ್ವತಃ ಆಕೆಯಂತೆ ಉಡುಪು ಧರಿಸಿ, ಬಳೆ ತೊಟ್ಟು, ಬೊಟ್ಟು ಇಟ್ಟುಕೊಂಡು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ. ಅಲ್ಲದೇ ಇದಕ್ಕಾಗಿ ನಕಲಿ ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಕೂಡ ಸಿದ್ಧಪಡಿಸಿಕೊಂಡಿದ್ದ.
ಆದರೆ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಈತ ಸಿಕ್ಕಿಬಿದ್ದಿದ್ದು, ಪರೀಕ್ಷಾ ಕೇಂದ್ರದ ಅಧಿಕಾರಿಗಳು ಆತನನ್ನು ಹಿಡಿದು, ಪೊಲೀಸರ ವಶಕ್ಕೆ ನೀಡಿದ್ದಾರೆ. ಪರೀಕ್ಷಾ ನಕಲು ಸಂಬಂಧ ಅಂಗ್ರೇಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.














