ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ನಡುವೆ ಟಿಕೆಟ್ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಭಾರಿ ದಂಡವನ್ನು ತೆತ್ತಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನಿಖಾ ತಂಡಗಳು ಡಿಸೆಂಬರ್-2023 ರಲ್ಲಿ 16785 ಟ್ರಿಪ್ ಗಳನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಟಿಕೆಟ್ ರಹಿತ ಪ್ರಯಾಣಿಸುತ್ತಿದ್ದ 3502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ಸಂಸ್ಥೆಯ ನಿರ್ವಾಹಕರ ವಿರುದ್ಧ 1085 ಪ್ರಕರಣಗಳು ದಾಖಲಾಗಿವೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಂದ ಒಟ್ಟು 34,700 ರೂ. ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಡಿಸೆಂಬರ್-2023 ರ ತಿಂಗಳಲ್ಲಿ 3849 ಪ್ರಯಾಣಿಕರಿಂದ ಒಟ್ಟು 7,37,040 ರೂ. ದಂಡ ವಸೂಲಿ ಮಾಡಲಾಗಿದೆ.