ಮನೆ ಸ್ಥಳೀಯ ನಾಡಿಗೆ  ‘ರೆಬಲ್ ಸ್ಟಾರ್ ‘ ಅಂಬರೀಶ್ ಕೊಡುಗೆ ಸ್ಮರಣೀಯ: ಸಾಹಿತಿ ಬನ್ನೂರು ರಾಜು

ನಾಡಿಗೆ  ‘ರೆಬಲ್ ಸ್ಟಾರ್ ‘ ಅಂಬರೀಶ್ ಕೊಡುಗೆ ಸ್ಮರಣೀಯ: ಸಾಹಿತಿ ಬನ್ನೂರು ರಾಜು

0

ಮೈಸೂರು: ಬದುಕಿದ್ದಾಗಲೇ ದಂತ ಕತೆಯಂತಿದ್ದು, ತಮ್ಮ ಕೊಡುಗೈ ಗುಣದಿಂದ ಕಲಿಯುಗದ ಕರ್ಣನೆಂದೇ ನಾಡಿನ ಉದ್ದಗಲಕ್ಕೂ ಹೆಸರಾಗಿದ್ದ ಹೃದಯವಂತ ಕಲಾವಿದ ರೆಬಲ್ ಸ್ಟಾರ್ ಅಂಬರೀಶ್ ಅವರು ನಾಡಿಗೆ ನೀಡಿರುವ ಕೊಡುಗೆ ಸ್ಮರಣೀಯವಾದದ್ದೆಂದು ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು.

ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಸಾಹಿತಿ ಬನ್ನೂರು ಕೆ.ರಾಜು ಅವರ ಸ್ವಗೃಹದಲ್ಲಿ ಬೆಂಗಳೂರಿನ ನ್ಯಾಯ, ನೀತಿ, ಧರ್ಮ ರೆಬಲ್ ಸ್ಟಾರ್ ಡಾ.ಅಂಬರೀಶ್ ಸೇನಾ  ಸಮಿತಿ ಮತ್ತು ಡಾ.ಅಂಬರೀಶ್ ಸಾಂಸ್ಕೃತಿಕ  ಕಲಾ ಅಕಾಡೆಮಿ ಚಾರಿಟಬಲ್ ಟ್ರಸ್ಟ್  ಹಾಗೂ ಮಂಡ್ಯದ ಕಾವೇರಿ ಕರುನಾಡು ವೇದಿಕೆಗಳು  ಸಂಯುಕ್ತವಾಗಿ ರೆಬಲ್ ಸ್ಟಾರ್ ಅಂಬರೀಶ್ ನೆನಪಿನಲ್ಲಿ ಏರ್ಪಡಿಸಿದ್ದ 2024 ನೇ ವರ್ಷದ ವಿವಿಧ ಬಗೆಯ ವರ್ಣರಂಜಿತವಾದ ದಿನದರ್ಶಿಕೆಗಳ ಬಿಡುಗಡೆಯ ಕಾರ್ಯಕ್ರಮದಲ್ಲಿ ದಿನದರ್ಶಿಕೆ ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಮೂಲಕ  ಅನೇಕ ದಾಖಲೆಗಳನ್ನು ಮಾಡಿ ಇಡೀ ಭಾರತೀಯ ಚಿತ್ರರಂಗ ತಮ್ಮತ್ತ ಮತ್ತು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿ ಹೋಗಿರುವ ಅಂಬರೀಶ್ ಅವರಂಥ ಮಾನವೀಯ ಗುಣದ ಅಪರೂಪದ ಮೇರು ಕಲಾವಿದರ ನೆನಪಿನಲ್ಲಿ ಅವರ ಅಭಿಮಾನಿಗಳು ಅಷ್ಟೇ ಅಪರೂಪವೆನಿಸುವ ಚೆಂದದ ದಿನದರ್ಶಿಕೆಗಳನ್ನು ಮಾಡಿ ಅಭಿಮಾನಿಗಳಿಗೆ  ಉಚಿತವಾಗಿ ವಿತರಿಸುತ್ತಿರುವುದು ನಿಜಕ್ಕೂ  ಶ್ಲಾಘನೀಯವೆಂದರು.

ಅಂಬರೀಶ್ ಅವರು ಕರ್ನಾಟಕ ಮತ್ತು ಭಾರತೀಯ ಚಿತ್ರರಂಗದ ಬಹು ದೊಡ್ಡ ನಟರಷ್ಟೇ ಆಗಿರಲಿಲ್ಲ. ಮೂರು ಬಾರಿ ಲೋಕಸಭಾ ಸದಸ್ಯರಾಗಿ ಹ್ಯಾಟ್ರಿಕ್ ಸಾಧಿಸಿ ಕೇಂದ್ರ ಸರ್ಕಾರದ ಸಚಿವರಾಗಿ,ರಾಜ್ಯ ಸರ್ಕಾರದ ಸಚಿವರಾಗಿ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಇಂಥ ಸಾಧನೆ ಮಾಡಿದ ಭಾರತೀಯ ಚಿತ್ರರಂಗದ ಏಕೈಕ ನಟನೆಂಬ ಚರಿತ್ರೆ ಬರೆದವರು. ಚಿತ್ರರಂಗ, ರಾಜಕೀಯ ಹೀಗೆ ಉಭಯ ಕ್ಷೇತ್ರಗಳಲ್ಲೂ ಕನ್ನಡ ನಾಡಿನಲ್ಲಿ ಯಾರೂ ಮಾಡಿರದ ಚರಿತ್ರಾರ್ಹ ದಾಖಲೆ ಇವತ್ತಿಗೂ ಅವರ ಹೆಸರಿನಲ್ಲೇ ಇದೆ. ಸಾಮಾಜಿಕ ಕ್ಷೇತ್ರದಲ್ಲೂ ಅವರ ಸೇವೆ ಮತ್ತು ಸಾಧನೆ ಅಪಾರವಾದದ್ದು. ಬಹುಮುಖಿ ಸೇವಕ ಹಾಗೂ ಸಾಧಕರಾಗಿದ್ದ ಅವರ ಕೀರ್ತಿಯ ವ್ಯಾಪ್ತಿ ಬಹು ವಿಶಾಲವಾದದ್ದಾಗಿದ್ದು ಆಸ್ಟ್ರೇಲಿಯದಂತಹ ವಿದೇಶ ಗಳಲ್ಲೂ ಅಂಬರೀಶ್ ಅಭಿಮಾ ನಿಗಳ ಸಂಘಗಳು ಇದ್ದವೆಂದು ಹೇಳಿದ ಅವರು, ಇಂದು ಬೌತಿಕವಾಗಿ ಅಂಬರೀಶ್ ನಮ್ಮೊಡನೆ ಇಲ್ಲದಿರಬಹುದು, ಆದರೆ ಅವರು ತಮ್ಮದೇ ಆದ ನಾಡು ಮರೆಯದ ಐತಿಹಾಸಿಕ ಸಾಧನೆಗಳಿಂದ ಯಾವತ್ತೂ ಜಗತ್ತಿನಲ್ಲಿ ಇದ್ದೇ ಇರುತ್ತಾರೆಂದು ಹೇಳಿದರು.

ಬಹಳ ಸರಳವಾಗಿ ನಡೆದ ಈ ಸಾರ್ಥಕ ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿಮಾನಿಗಳಾದ ರೆಬಲ್ ರಮೇಶ್, ಹೆಚ್.ಎನ್. ಸ್ವಾಮಿ, ಕೆ.ಆರ್.ಪೇಟೆ ರೆಬಲ್ ಜಬಿ, ಜಿ.ಕೆ.ಕುಮಾರ್ ಗೌಡ, ನಾಗೇಂದ್ರ ಹುನುಗನಹಳ್ಳಿ, ನವೀನ, ಗೋವಿಂದರಾಜ್, ಎಸ್.ಕೆ.ಕುಮಾರ್ ನಾಯಕ್  ಹೊಳೆನರಸೀಪುರ,ಕೇಶವ್, ಮನೋಹರ್,ಲೋಕೇಶ್ ಗೌಡ, ನಂಜುಂಡಸ್ವಾಮಿ, ಶಂಕರ್, ಮಂಜುನಾಥ್, ಪ್ರಕಾಶ್ ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ  ರೆಬಲ್ ಸ್ಟಾರ್ ಅಂಬರೀಶ್ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ರೆಬಲ್ ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬರೀಶ್ ಅವರ ಮಾನವೀಯ ಗುಣದ ವ್ಯಕ್ತಿತ್ವಕ್ಕೆ ತಕ್ಕಹಾಗೆ ಅವರ ಹೆಸರಿನಲ್ಲಿರುವ ಅಭಿಮಾನಿ ಸಂಘಗಳು ಕೂಡ ರಾಜ್ಯದಾದ್ಯಂತ  ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿವೆ ಎಂದು ಹೇಳಿದರು.