ಮನೆ ಸ್ಥಳೀಯ ಮುಂಬರುವ ದಿನಗಳಲ್ಲಿ ಬರ ಉಲ್ಬಣವಾಗಬಹುದು,ಕೂಡಲೇ ಕಾರ್ಯೋನ್ಮುಖರಾಗಿ: ಕೃಷ್ಣ ಭೈರೇಗೌಡ

ಮುಂಬರುವ ದಿನಗಳಲ್ಲಿ ಬರ ಉಲ್ಬಣವಾಗಬಹುದು,ಕೂಡಲೇ ಕಾರ್ಯೋನ್ಮುಖರಾಗಿ: ಕೃಷ್ಣ ಭೈರೇಗೌಡ

0

ಮೈಸೂರು: ಮುಂದಿನ ದಿನಗಳಲ್ಲಿ ಎದುರಾಗಹುದಾದ ಬರ ಪರಿಸ್ಥಿತಿ ನಿಭಾಯಿಸಲು ಕೂಡಲೇ ಕಾರ್ಯೋನ್ಮುಖರಾಗಿ,ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.


ಪ್ರಾದೇಶಿಕ ಆಯುಕ್ತರ ಕಚೇರಿ ಯಲ್ಲಿ ನಡೆದ ಮೈಸೂರು ಜಿಲ್ಲೆಯ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಬರಗಾಲ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಎರಡು ಬಾರಿ ಸಭೆ ಮುಂದೂಡಲಾಗಿದೆ ಹಾಗಾಗಿ ಮೊದಲ ಕಂತಿನ ಹಣವನ್ನು ರಾಜ್ಯ ಸರ್ಕಾರದಿಂದಲೇ ನೀಡಲು ಸಿ.ಎಂ. ನಿರ್ದೇಶನ ನೀಡಿದ್ದಾರೆ ಎಂದರು.
ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಲಭ್ಯತೆ ಬಗೆಗೆ ಖಾತರಿಪಡಿಸಿಕೊಳ್ಳಿ ,ಕಂದಾಯ ಇಲಾಖೆ ಜನರ ಸಮಸ್ಯೆಗಳ ನಿವಾರಣೆಗೆ ಮಂಚೂಣಿಯಲ್ಲಿರುವ ಇಲಾಖೆ ಆದರೆ ಕಂದಾಯ ಇಲಾಖೆ ಎಂದರೆ ವಿಳಂಬದ ಇಲಾಖೆ ಎಂಬಂತಾಗಿದೆ ಏಕೆಂದರೆ ಸಿ.ಎಂ.ಅವರು ಬೆಂಗಳೂರಿನಲ್ಲಿ ನಡೆಸುವ ಜನತಾದರ್ಶನಕ್ಕೆ ಬರುವ ದೂರುಗಳಲ್ಲಿ ಬಹುತೇಕ ಕಂದಾಯ ಇಲಾಖೆಯವೇ ಆಗಿರುತ್ತವೆ. ನೂರಾರು ಕಿಲೋಮೀಟರ್ ದೂರದಿಂದ ಬಂದು ಸಾರ್ವಜನಿಕರು ದೂರು ನೀಡುತ್ತಾರೆಂದರೆ ಡಿಸಿ,ತಹಶೀಲ್ದಾರರು ಏನು ಕೆಲಸ ಮಾಡುತ್ತೀರೆಂದು ನೀವೇ ಹೇಳಿ ಎಂದರು.
ನಕಾಶೆಯಲ್ಲಿರುವ ಕಾಲುದಾರಿ ಒತ್ತುವರಿ ಬಿಡಿಸಿಕೊಡಲು ತಮ್ಮಿಂದ ಆಗದಿದ್ದರೆ ಅದಕ್ಕೂ ಸಚಿವರು ಬರಬೇಕಾ,ಹಾಗಾದರೆ ತಮ್ಮ ಕೆಲಸವೇನು? ಮೊದಲು ಇಂತಹ ಮನೋಭಾವನೆಯಿಂದ ಹೊರಬನ್ನಿ ನಾವು ನೀವು ಕೂಡಿ ಕೆಲಸ ಮಾಡೋಣ ಎಂದರು.

ಇ – ಆಫೀಸ್ ಅನುಷ್ಟಾನವಿಲ್ಲ : ಕಡತ ವಿಲೇವಾರಿಯಲ್ಲಿ ಪಾರದರ್ಶಕತೆ ಬರಲಿ ಎಂಬ ಉದ್ದೇಶದಿಂದ ಇ,ಆಪೀಸ್ ಜಾರಿ ಮಾಡಲು ಸೂಚಿಸಿದರೂ ಯಾರೊಬ್ಬರೂ ಅನುಷ್ಟಾನಕ್ಕೆ ತರುತ್ತಿಲ್ಲ ಸಬೂಬು ಹೇಳ್ತೀರಿ,ಸಬೂಬು ಹೇಳುವುದ ಬಿಟ್ಟು ಕೆಲಸ ಮಾಡಿ ಎಂದರು.
ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಆಗಿದೆ, ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿರುತ್ತದೆ, ನಮ್ಮ ಕೆಲಸ ಸರಿಯಾಗಿದ್ದರೆ ಇಲಾಖೆಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಬೆಳೆ ವಿಮೆ ತಂತ್ರಾಂಶದಲ್ಲಿ ಫಲಾನುಭವಿಗಳ ವಿವರ ಸರಿಯಾಗಿ ದಾಖಲಾಗಿಲ್ಲ, ತಮ್ಮ ಜಮೀನಿನಲ್ಲಿ ಬೆಳೆ ಇಡದೇ ಇರುವವರಿಗೂ ಪರಿಹಾರ ಪಾವತಿಯಾಗಿದೆ, ವ್ಯಕ್ತಿಯೋರ್ವರ ಪರಿವರ್ತಿತ ಭೂಮಿಗೂ ಪರಿಹಾರ ಬಂದಿದೆ ಹಾಗಾಗಿ ಹಣ ದುರುಪಯೋಗವಾಗದಂತೆ ಕ್ರಾಪ್ ಸರ್ವೆನಲ್ಲಿ ಇರುವವರಿಗೆ ಬೆಳೆ ವಿಮೆ ದೊರೆಯುವಂತೆ ನೋಡಿಕೊಳ್ಳಿ ಎಂದರು.
ರಾಘವೇಂದ್ರ ಸ್ವಾಮಿ ಮೇಲೆ ಆಣೆ : ಸಬ್ ರಿಜಿಸ್ಟ್ರಾರ್ ಕಛೇರಿ ಗಳಲ್ಲಿ ಡಬಲ್ ಪೇಮೆಂಟ್ ಕೇಳ್ತಾರೆ ಎಂಬ ದೂರುಗಳಿವೆ, ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಸ್ವಾಮಿ ಆಣೆಗೂ ನನಗೆ ಗೊತ್ತಿಲ್ಲ ಎನ್ನುತ್ತಾರೆ, ಹಾಗಾದರೆ ಲಂಚ ಪಡೆಯುತ್ತಿರುವವರು ಯಾರು ಎಂದರು.
ಕಂದಾಯ ಗ್ರಾಮ : ತಾಂಡ,ಹಟ್ಟಿ,ಕ್ಯಾಂಪ್,ಹಾಡಿ ಹಾಗೂ ಕೊಪ್ಪಲುಗಳನ್ನು ಗ್ರಾಮಗಳಾಗಿ ಪರಿವರ್ತಿಸಲು 2017 ರಲ್ಲೇ ಕಾನೂನು ಮಾಡಲಾಗಿದೆ ಈಗಾಗಲೇ 1 ಸಾವಿರ ಗ್ರಾಮಗಳು ಕಂದಾಯ ಗ್ರಾಮಗಳಾಗಿದ್ದು, ಮೈಸೂರಿನಲ್ಲಿಯೂ ಚುರುಕುಗೊಳ್ಳಬೇಕು ಹಾಗೂ ತಕರಾರು ಅರ್ಜಿಗಳನ್ನ ಪರಿಗಣಿಸಬೇಡಿ ಎಂದರು.
ಸ್ಮಶಾನಕ್ಕೆ ಭೂಮಿ : ಸ್ಮಶಾನಕ್ಕೆ ಭೂಮಿ ಖರೀದಿಸಲು ಹಣ ಇದ್ದು ಕಾನೂನಿನ ಮಿತಿಯೊಳಗೆ ಖರೀದಿ ಮಾಡಬಹುದು, ಒಂದು ವೇಳೆ ದರ ಜಾಸ್ತಿ ಇದ್ದಲ್ಲಿ ದೂರದಲ್ಲಿ ಭೂಮಿ ಖರೀದಿಸಬಹುದೆಂದರು.
ಗ್ರಾಮ ಲೆಕ್ಕಿಗರನ್ನು ಗ್ರಾ.ಪಂ. ಕಛೇರಿಯಲ್ಲಿ ಲಭ್ಯವಿರುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕೆಂದ ಶಾಸಕ ಜಿ.ಟಿ.ದೇವೇಗೌಡರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆಯೇ ಈ ಬಗೆಗೆ ಚರ್ಚೆ ಆಗಿದ್ದು ಜಾರಿಮಾಡಲಾಗುವುದೆಂದರು.
ಡಿಜಿಟಲ್ ಸಾಗುವಳಿ ಚೀಟಿ : ನಕಲಿ ಸಾಗುವಳಿ ಚೀಟಿ ತಡೆಗಟ್ಟಲು ಡಿಜಿಟಲ್ ಸಾಗುವಳಿ ನೀಡಲು ತೀರ್ಮಾನಿಸಲಾಗಿದೆ,ಸಾಗುವಳಿ ಚೀಟಿ ನೀಡುವಾಗಲೇ ಪೋಡಿ,ದುರಸ್ತು ಮಾಡಲಾಗುವುದೆಂದರು.
ಮೈಸೂರು ಜಿಲ್ಲೆಯಲ್ಲಿ ಜಮೀನು ಮಂಜೂರಿಯ 94ಸಿ ಅಡಿ 7800 ಅರ್ಜಿಗಳು ವಿಲೇವಾರಿ ಆಗಿವೆ 420 ಅರ್ಜಿ ಗಳು ಬಾಕಿ ಇದ್ದು ಶೀಘ್ರವಾಗಿ ಅವುಗಳನ್ನು ವಲೇವಾರಿ ಮಾಡಿ ಎಂದರು.
ಪೌತಿ ಖಾತೆ ಅಭಿಯಾನ ಚುರುಕುಗೊಳಿಸಿ ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ,ಹರೀಶ್ ಗೌಡ,ಮಂಜೇಗೌಡ,ಪ್ರಾದೇಶಿಕ ಆಯುಕ್ತರಾದ ಜೆ.ಸಿ.ಪ್ರಕಾಶ್,ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಅಪರ ಜಿಲ್ಲಾಧಿಕಾರಿ ಲೋಕನಾಥ್, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.