ಮನೆ ಕಾನೂನು ಕೆ.ಆರ್.ನಗರ ಪಟ್ಟಣ ಪುರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ಕಡತ ಪರಿಶೀಲನೆ

ಕೆ.ಆರ್.ನಗರ ಪಟ್ಟಣ ಪುರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ಕಡತ ಪರಿಶೀಲನೆ

0


ಕೆ .ಆರ್.ನಗರ: ಪಟ್ಟಣದ ಪುರಸಭೆ ಕಛೇರಿಗೆ ಲೋಕಾಯುಕ್ತ ಡಿವೈಎಸ್‌ ಪಿ ಎಸ್.ಕೆ.ಮಾಲ್ತೇಶ್ ಮತ್ತು ಇನ್ಸ್ಪೆಕ್ಟರ್ ರವಿಕುಮಾರ್ ದಿಢೀರ್ ಭೇಟಿ ನೀಡಿ ಮೂರು ಗಂಟೆಗಳ ಕಾಲ ಕಡತ ಪರಿಶೀಲನೆ ನಡೆಸಿದರು.


ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರುಗಳು ಕಾಮಗಾರಿ, ಜನನ ಮತ್ತು ಮರಣ ಪ್ರಮಾಣ ಪತ್ರ, ನಿವೇಶನ ಮತ್ತು ಮನೆ ಖಾತೆ ಸೇರಿದಂತೆ ಇತರ ಎಲ್ಲಾ ಕಡತಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ ಪಿ, ಕಛೇರಿಯಲ್ಲಿ ೫೦೦ ಕಡತಗಳು ವಿಲೇವಾರಿಯಾಗದೆ ಬಾಕಿ ಇದ್ದು,‌ ಇದರ ಜತೆಗೆ ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡಲು ಸಿಬ್ಬಂದಿ ಅನಗತ್ಯವಾಗಿ ಅಲೆದಾಡಿಸುತ್ತಾರೆ ಎಂಬ ವ್ಯಾಪಕವಾದ ದೂರುಗಳಿದ್ದು ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ವಿಚಾರ ತಿಳಿದು ಆಗಮಿಸಿದ ಕೆಲವು ನಾಗರಿಕರು ತಮ್ಮ ಅಹವಾಲುಗಳನ್ನು ಹೇಳಿಕೊಂಡಾಗ ಇದಕ್ಕೆ ಸ್ಪಂದಿಸಿದ ಅವರುಗಳು ಕೂಡಲೇ ಸಂಬಂಧಿತರಿಗೆ ಆದೇಶಿಸಿ ಅವರ ಕಛೇರಿ ಕೆಲಸಗಳನ್ನು ಕೂಡಲೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಇರುವ ೭೨ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದ್ದರೂ ಹರಾಜು ಮಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ನಮ್ಮ ಕಛೇರಿಗೆ ಹಲವು ದೂರುಗಳು ಬಂದಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ದಾಖಲಾತಿಗಳನ್ನು ತರಿಸಿಕೊಂಡು ನಿಯಮಾನುಸಾರ ಹರಾಜು ಮಾಡುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.