ಮನೆ ಮನರಂಜನೆ ಜನವರಿ 20 ರಂದು ‘ಸಲಾರ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್

ಜನವರಿ 20 ರಂದು ‘ಸಲಾರ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್

0

ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈಗ ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಮೊದಲೇ ಈ ಚಿತ್ರ ನೆಟ್​ಫ್ಲಿಕ್ಸ್ ಮೂಲಕ ವೀಕ್ಷಣೆಗೆ ಲಭ್ಯ ಆಗಲಿದೆ. ಹೌದು, ಜನವರಿ  20ರಂದು ‘ಸಲಾರ್’ ಸಿನಿಮಾ ನೆಟ್​ ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಲಿದೆ.

ತೆಲುಗು, ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ನೋಡಲು ಅವಕಾಶ ಇದೆ. ಇದು ಅಭಿಮಾನಿಗಳಿಗೆ ಸರ್​ ಪ್ರೈಸ್ ಎನಿಸಿದೆ.

ಈ ಬಗ್ಗೆ ನೆಟ್​ ಫ್ಲಿಕ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ‘ಕಾಟೇರಮ್ಮನ ಮಗ ನೆಟ್​ಫ್ಲಿಕ್ಸ್​ಗೆ ಬರುತ್ತಿದ್ದಾನೆ’ ಎಂದು ಈ ಒಟಿಟಿ ಸಂಸ್ಥೆ ಟ್ವೀಟ್ ಮಾಡಿದೆ. ಈ ಚಿತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿದೆ. ಈಗ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಅಬ್ಬರಿಸೋಕೆ ರೆಡಿ ಆಗಿದೆ. ಈ ಮೊದಲು ‘ಸಲಾರ್’ ಸಿನಿಮಾ ಜನವರಿ 26ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂದು ಸುದ್ದಿ ಆಗಿತ್ತು.

 ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಅವರು ಮಾಸ್ ಅವತಾರ ತಾಳಿದ್ದಾರೆ. ಪೃಥ್ವಿರಾಜ್​ ಸುಕುಮಾರನ್ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರುತಿ ಹಾಸನ್ ನಾಯಕಿ ಪಾತ್ರ ಮಾಡಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್ ರೀತಿಯಲ್ಲಿ ನನಗೆ ಈ ಸಿನಿಮಾ ಕಾಣಿಸಿತು’  ಎಂದು ಪೃಥ್ವಿರಾಜ್ ಸುಕುಮಾರನ್ ಹೇಳಿದ್ದರು. ಸಿನಿಮಾ ನೋಡಿದ ಅನೇಕರಿಗೆ ಇದು ಹೌದು ಎನ್ನಿಸಿದೆ.

‘ಸಲಾರ್’ ಸಿನಿಮಾದ ಕಥೆಗೂ ‘ಉಗ್ರಂ’ ಚಿತ್ರಕ್ಕೂ ಲಿಂಕ್ ಕಲ್ಪಿಸಲಾಗಿದೆ. ಇದು ಚಿತ್ರಕ್ಕೆ ಹಿನ್ನಡೆ ಉಂಟು ಮಾಡಿತು. ಮೇಕಿಂಗ್ ವಿಚಾರದಲ್ಲಿ ‘ಸಲಾರ್’ ಸಿನಿಮಾ ‘ಕೆಜಿಎಫ್ 2’ ಚಿತ್ರವನ್ನು ನೆನಪಿಸಿದೆ. ಇದರಿಂದಲೂ ಚಿತ್ರಕ್ಕೆ ಹಿನ್ನಡೆ ಆಯಿತು. ಈಗ ಚಿತ್ರವನ್ನು ಜನರು ಒಟಿಟಿಯಲ್ಲಿ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ‘ಸಲಾರ್’ ಚಿತ್ರಕ್ಕೆ ಎರಡನೇ ಪಾರ್ಟ್ ಕೂಡ ಸಿದ್ಧಗೊಳ್ಳಲಿದೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ.