ಮನೆ ಅಪರಾಧ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ: ಆರೋಪಿ ಬಂಧನ, ಪ್ರಾಚಾರ್ಯ, ವಾರ್ಡನ್ ಅಮಾನತು

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ: ಆರೋಪಿ ಬಂಧನ, ಪ್ರಾಚಾರ್ಯ, ವಾರ್ಡನ್ ಅಮಾನತು

0

ಕಲಬುರಗಿ: ಎಸ್​ ಎಸ್ ​ಎಲ್ ​ಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ದೊಡ್ಡಪ್ಪನ ಮಗನ ಕಾರಣದಿಂದಾಗಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಅಡಿ ದೂರು ದಾಖಲಾಗಿದೆ.

ಬಾಲಕಿ ಹಾಸ್ಟೇಲ್ ನಲ್ಲಿದ್ದರೂ ಗಮನಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಸತಿ ನಿಲಯದ ಪಾಲಕ ಸೇರಿ ಇಬ್ಬರನ್ನೂ ಅಮಾನತ್ತು ಮಾಡಲಾಗಿದೆ.

ಘಟನೆ ವಿವರ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಳಂದ ತಾಲೂಕಿನ ಗ್ರಾಮವೊಂದರ ವಸತಿ ಶಾಲೆಯಲ್ಲಿ ಇದ್ದ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಹಾಸ್ಟೇಲ್ ಸಿಬ್ಬಂದಿ ಬಾಲಕಿಯನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದರು. ಹೊಟ್ಟೆ ನೋವು ತೀವ್ರವಾದಾಗ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ. ಸ್ಕ್ಯಾನಿಂಗ್ ನಲ್ಲಿ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬಯಲಾಗಿದೆ. ಡಿಸೆಂಬರ್ 28ರಂದು ಬಾಲಕಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿದೆ.

ಮಗಳ ಪರಿಸ್ಥಿತಿ ಕಂಡು ಹೆತ್ತವರು ಕಣ್ಣೀರು ಇಟ್ಟಿದ್ದಾರೆ. ಬಾಲಕಿಯನ್ನು ತಾಯಿಯಾಗಿಸಿದವನು ಆಕೆಯ ಸಹೋದರ (ದೊಡ್ಡಪ್ಪನ ಮಗ) ಎಂಬ ವಿಚಾರ ಹೆತ್ತವರಿಗೆ ಹೆಚ್ಚಿನ ನೋವು ತಂದಿದೆ.

ಪ್ರಕರಣ ಬೆಳಕಿಗೆ ಬಂದ ನಂತರ ಸೊಲ್ಲಾಪುರದ ಆಸ್ಪತ್ರೆಯವರ ಮಾಹಿತಿ ಮೇರೆಗೆ ಕಲಬುರಗಿ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಅಡಿ ದೂರು ದಾಖಲಾಗಿದ್ದು, ಬಾಲಕಿಯ ಈ ಸ್ಥಿತಿಗೆ ಕಾರಣವಾದ ಸಹೋದರ ಸಂಬಂಧಿ ಯುವಕನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಹಾಸ್ಟೇಲ್​ನಲ್ಲಿದ್ದರೂ ಗಮನಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಸತಿ ನಿಲಯದ ಪಾಲಕ ಸೇರಿ ಇಬ್ಬರನ್ನು ಅಮಾನತ್ತು ಮಾಡಲಾಗಿದೆ.

ಆರೋಗ್ಯವಾಗಿರುವ ಮಗುವನ್ನು ಕಲಬುರಗಿಯ ಅಮೂಲ್ಯ ಶಿಶು ಗೃಹದಲ್ಲಿ ಆರೈಕೆ ಮಾಡಲಾಗುತ್ತಿದೆ.