ಮನೆ ಕಾನೂನು ರಾಮ ಮಂದಿರ ನೇರ ಪ್ರಸಾರದ ಕೋರಿಕೆಗಳನ್ನು ತಿರಸ್ಕರಿಸಬೇಡಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ರಾಮ ಮಂದಿರ ನೇರ ಪ್ರಸಾರದ ಕೋರಿಕೆಗಳನ್ನು ತಿರಸ್ಕರಿಸಬೇಡಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

0

ದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನೇರ ಪ್ರಸಾರ ಮಾಡುವುದಕ್ಕೆ ತಮಿಳುನಾಡು  ಸರ್ಕಾರ ಅನುಮತಿಯನ್ನು ನಿರಾಕರಿಸಿದ ನಿರ್ಧಾರವನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ ಸುಪ್ರೀಂ, ನೇರ ಪ್ರಸಾರದ ಕೋರಿಕೆಗಳನ್ನು ತಿರಸ್ಕರಿಸಬೇಡಿ ಎಂದು ಹೇಳಿದೆ.

ಇತರ ಸಮುದಾಯದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ನೇರ ಪ್ರಸಾರ ಮಾಡುವುದನ್ನು ತಡೆಯುವುದು ಅಥವಾ ಅನುಮತಿ ನೀಡದಿರುವುದು ತಪ್ಪು ಎಂದು ಹೇಳಿದೆ. ಈ ಬಗ್ಗೆ ಸರಿಯಾದ ಕಾರಣ ಇದ್ದರೆ ತಿಳಿಸಿ ಎಂದು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಹೇಳಿದೆ.

ಸಮಾರಂಭದ ಪ್ರದರ್ಶನ ಅಥವಾ ಈ ಸಂದರ್ಭದಲ್ಲಿ ವಿಶೇಷ ಪೂಜೆ ಅಥವಾ ಭಜನೆಗಳನ್ನು ನಡೆಸುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ರಾಮ್ ಲಲ್ಲಾ ‘ಪ್ರಾಣ-ಪ್ರತಿಷ್ಠೆ’ ಸಮಾರಂಭದ ನೇರ ಪ್ರಸಾರವನ್ನು ಕೆಲವೊಂದು ಪ್ರದೇಶದಲ್ಲಿ ನಿರಾಕರಿಸಿರುವ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದ ಕ್ರಮದ ಬಗ್ಗೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ತುರ್ತು ವಿಚಾರಣೆ ಮಾಡುವಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೋರಿಕೊಂಡಿತ್ತು. ಇದೀಗ ಸುಪ್ರೀಂ ಇಂದು ಈ ಅರ್ಜಿಯನ್ನು ವಿಚಾರಣೆ ಮಾಡಿ, ಈ ನಿರ್ಧಾರವನ್ನು ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ವಿನೋಜ್ ಪಿ ಸೆಲ್ವಂ ಪರ ವಕೀಲ ಜಿ ಬಾಲಾಜಿ ಅವರು ಅರ್ಜಿ ಸಲ್ಲಿಸಿದ್ದಾರೆ. ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಮನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ದೇವಸ್ಥಾನಗಳಲ್ಲಿ ನೇರಪ್ರಸಾರ ಮಾಡುವುದನ್ನು ನಿಷೇಧಿಸಿದೆ ಎಂದು ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿತ್ತು.