ಮನೆ ಕಾನೂನು ಹಿರಿಯ ವಕೀಲರ ಬಳಿ ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್ನ್‌ಶಿಪ್‌: ನಿಯಮ ಪಾಲನೆ ವರದಿ ಸಲ್ಲಿಸಲು ಸುಪ್ರೀಂ...

ಹಿರಿಯ ವಕೀಲರ ಬಳಿ ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್ನ್‌ಶಿಪ್‌: ನಿಯಮ ಪಾಲನೆ ವರದಿ ಸಲ್ಲಿಸಲು ಸುಪ್ರೀಂ ಸೂಚನೆ

0

ರಜೆಯ ಅವಧಿಯಲ್ಲಿ ಕಾನೂನು ವಿದ್ಯಾರ್ಥಿಗಳನ್ನು ಇಂಟರ್ನ್‌ಶಿಪ್‌ಗೆ (ಕಾನೂನು ಪ್ರಾಯೋಗಿಕ ತರಬೇತಿ ಶಿಕ್ಷಣ ದೊರಕಲು ಪ್ರಶಿಕ್ಷಣಾರ್ಥಿಗಳಾಗಿ ಸೇರಿಸಿಕೊಳ್ಳುವುದು) ತೆಗೆದುಕೊಳ್ಳಲು ಸಿದ್ಧರಿರುವ ಪ್ರತಿ ಜಿಲ್ಲೆಯ ಹಿರಿಯ ವಕೀಲರ ಪಟ್ಟಿ ಸಿದ್ಧಪಡಿಸುವಂತೆ ವಕೀಲರ ಪರಿಷತ್‌ಗಳಿಗೆ ವಿಧಿಸಲಾದ ಕಡ್ಡಾಯ ನಿಯಮ ಪಾಲಿಸಲಾಗಿದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ರಾಜ್ಯ ವಕೀಲರ ಪರಿಷತ್ತಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಜನವರಿ 16ರಂದು ಈ ಆದೇಶ ಹೊರಡಿಸಿದ್ದು ಇನ್ನು ಆರು ವಾರಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ನಿಯಮ 26ರ ಪ್ರಕಾರ, ನ್ಯಾಯಾಲಯದ ರಜಾದಿನಗಳಲ್ಲಿ ಕಾನೂನು ಪ್ರಶಿಕ್ಷಣಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲು ಸಿದ್ಧರಿರುವ ಕನಿಷ್ಠ 10 ವರ್ಷ ಅನುಭವ ಇರುವ ಹಿರಿಯ ವಕೀಲರ ಜಿಲ್ಲಾ ಪಟ್ಟಿ ಸಿದ್ಧಪಡಿಸುವುದು ರಾಜ್ಯ ವಕೀಲರ ಪರಿಷತ್‌ಗಳ ಹೊಣೆ.

ಕಾನೂನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ವಕೀಲರ ಪರಿಷತ್‌ಗಳು ಸಿದ್ಧಪಡಿಸಿದ ಆ ಹಿರಿಯ ನ್ಯಾಯವಾದಿಗಳ ಪಟ್ಟಿಯನ್ನು ಪ್ರಕಟಿಸುವುದು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಬಿಟ್ಟ ವಿಚಾರ ಎಂದು ನ್ಯಾಯಪೀಠ ಹೇಳಿದೆ.

ನೀರಜ್ ಸಲೋಡ್ಕರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ವಿಶೇಷವೆಂದರೆ, 2008ರ ನಿಯಮಾವಳಿಗಳಡಿ ಹಿರಿಯ ವಕೀಲರ ಪಟ್ಟಿ ಕೋರಿ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಿದ್ದ ಅರ್ಜಿಗೆ ಸೂಕ್ತ ಪ್ರತಿಕ್ರಿಯೆ ನೀಡದ ಬಿಸಿಐಯನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಜೂನ್ 2022ರಲ್ಲಿ ತರಾಟೆಗೆ ತೆಗೆದುಕೊಂಡಿತ್ತು.

ಆಗ ಆಯಾ ರಾಜ್ಯ ವಕೀಲರ ಪರಿಷತ್ತುಗಳನ್ನು ಸಂಪರ್ಕಿಸುವಂತೆ ಬಿಸಿಐ ಸೂಚಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಐಸಿ “ಕಾನೂನು ಶಿಕ್ಷಣದ ನಿಯಮಾವಳಿ ಭಾಗ 4ರ ಶೆಡ್ಯೂಲ್ 3ರ ನಿಯಮ 26 ಅನ್ನು ಬಿಸಿಐ ಜಾರಿಗೆ ತರುತ್ತಿಲ್ಲ” ಎಂದಿತ್ತು. ಪಟ್ಟಿಯನ್ನು ತಕ್ಷಣವೇ ಜಾಲತಾಣದಲ್ಲಿ ಪ್ರಕಟಿಸಿ ಕಾಲಕಾಲಕ್ಕೆ ನವೀಕರಿಸುವಂತೆ ಬಿಸಿಐಗೆ ನಿರ್ದೇಶಿಸಿತ್ತು. ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಸಲೋಡ್ಕರ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಪಟ್ಟಿ ಸಿದ್ಧವಾಗುತ್ತಿದೆ ಎಂದು ಬಿಸಿಐ ಪರ ವಕೀಲರು ಕಳೆದ ವರ್ಷ ಮಾರ್ಚ್‌ನಲ್ಲಿ ತಿಳಿಸಿದ್ದರು.