ಮನೆ ಸ್ಥಳೀಯ ಜನವರಿ ೨೫ ರಂದು ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ

ಜನವರಿ ೨೫ ರಂದು ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ

0

ಮೈಸೂರು : ಸುತ್ತೂರು ಮಠದಲ್ಲಿ ಇದೇ ಜನವರಿ ೨೫ ರಂದು ಗುರುವಾರ ಸಂಜೆ ೬.೦೦ ಗಂಟೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ-೨೬೩ರ ಅಂಗವಾಗಿ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿರವರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿಯವರು ಸುಮಾರು ನಲವತ್ತು ವರ್ಷಗಳಿಂದ ಕರ್ನಾಟಕದ ಸಂಗೀತ ಕ್ಷೇತ್ರದಲ್ಲಿ ಕಂಗೊಳಿಸುತ್ತಿರುವ ಅಪೂರ್ವ ಕಲಾವಿದರು. ಇವರ ಆರಂಭಿಕ ಸಂಗೀತಾಭ್ಯಾಸ ಪಂ. ಶೇಷಗಿರಿ ದಂಡಾಪುತ್‌ ರವರ ಬಳಿ ನಡೆಯಿತು.

ಅನಂತರ ಧಾರವಾಡದ ಪಂ. ಚಂದ್ರಶೇಖರ ಪುರಾಣಿಕಮಠರವರಲ್ಲಿ ಖ್ಯಾಲ್ ಗಾಯನವನ್ನು, ಬಳಿಕ ಪದ್ಮಭೂಷಣ ಪಂ. ಬಸವರಾಜ ರಾಜಗುರುಗಳ ಬಳಿ ಕಿರಾಣಾ-ಗ್ವಾಲಿಯರ್ ಘರಾಣೆಯಲ್ಲಿ ಹನ್ನೆರಡು ವರ್ಷ ಕಾಲ ಸಂಗೀತವನ್ನು ಕಲಿತರು. ಜೈಪುರ್-ಅತ್ರೌಲಿ ಘರಾಣೆಯಲ್ಲಿ ಗಾನಕಲಾಸರಸ್ವತಿ ಪದ್ಮವಿಭೂಷಣ ಕಿಶೋರಿ ಅಮೊನ್‌ಕರ್‌ರವರ ಬಳಿ ಸಂಗೀತದ ಹೊಸ ಆಯಾಮಗಳನ್ನು ಕರಗತ ಮಾಡಿಕೊಂಡರು. ಧಾರವಾಡದ ಅನಂತಾಚಾರ್ ಕಟಗೇರಿಯವರ ಬಳಿ ದಾಸವಾಣಿ/ಸಂತವಾಣಿ ಪ್ರಸ್ತುತಿಯಲ್ಲಿ ತರಬೇತಿ ಪಡೆದರು. ಇದುವರೆಗೆ ಇವರ ಸುಮಾರು ೫೦೦ಕ್ಕೂ ಹೆಚ್ಚು ಧ್ವನಿಸುರುಳಿಗಳು ಹೊರಬಂದಿವೆ. ಸಂಗೀತ ಕ್ಷೇತ್ರದ ಎಲ್ಲ ದಿಗ್ಗಜರೊಡನೆಯೂ ವೇದಿಕೆ ಹಂಚಿಕೊಂಡಿದ್ದಾರೆ. ಕನ್ನಡ, ತಮಿಳು ಸಿನಿಮಾಗಳ ಹಿನ್ನೆಲೆ ಗಾಯಕರಾಗಿ ೫೦೦ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಟಿವಿ ಧಾರಾವಾಹಿಗಳಿಗೆ ಹಾಡಿರುವ ಗೀತೆಗಳು ಅಸಂಖ್ಯಾತ. ಟಿವಿ ವಾಹಿನಿಗಳ ಹಲವಾರು ಯೋಜನೆಗಳ ಹಿಂದಿನ ರೂವಾರಿಗಳು. ಸಂಗೀತ ನಿರ್ದೇಶನದಲ್ಲೂ ಸಿದ್ಧಹಸ್ತರು.

ಅಮೆರಿಕದ ಒಹಾಯೋ ನಗರದಲ್ಲಿ “ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮತ್ತು ಭಾರತೀಯ ಸಂಗೀತದ ವೈಶಿಷ್ಟ್ಯ” ಎಂಬ ವಿಷಯವಾಗಿ ಹಾಗೂ ದೇಶವಿದೇಶಗಳ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಸಂಗೀತದ ಪ್ರಾತ್ಯಕ್ಷಿಕೆ ನೀಡಿ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಇವರು ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರು. ಚಲನಚಿತ್ರ ವಿಮರ್ಶಕರ ಶ್ರೇಷ್ಠ ಚಿತ್ರಗೀತೆ ಗಾಯಕಿ ಪ್ರಶಸ್ತಿ, ಉದಯ ಟಿವಿಯ ನಾಕೌಟ್ ಪ್ರಶಸ್ತಿ, ಈ ಟಿವಿಯ ಶ್ರೇಷ್ಠ ಸಂಗೀತಗಾರ್ತಿ ಪ್ರಶಸ್ತಿ, ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪುರಸ್ಕಾರ, ಶೃಂಗೇರಿ ಶಾರದಾಪೀಠದ ಆಸ್ಥಾನವಿದುಷಿ, ಬಸವ ವೇದಿಕೆಯ ವಚನ ಸಾಹಿತ್ಯಶ್ರೀ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, ರಾಷ್ಟ್ರೀಯ ಟಿವಿ ವಾಹಿನಿ ಸಿಎನ್‌ಎನ್ ನ್ಯೂಸ್-೧೮ ನೀಡಿದ ಸಾರ್ಥಕ್ ನಾರಿ

ಪ್ರಶಸ್ತಿ, ಹಾರಕೂಡ ಶ್ರೀ ಚನ್ನವೀರ ಬಸವ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

ಹಾರ್ಮೋನಿಯಂ ವಾದನದಲ್ಲಿ ಸಹಕರಿಸಲಿರುವ ಪಂ. ಉಮಾಕಾಂತ ಪುರಾಣಿಕ್ರವರು ಹಿಂದೂಸ್ತಾನಿ ಸಂಗೀತಗಾರರು. ಅಕ್ಕ ವೀಣಾ ಅರಳಿಕಟ್ಟಿ ಮತ್ತು ಅಣ್ಣ ನಾರಾಯಣ್ ನಾಯಕ್ರವರುಗಳಲ್ಲಿ ಸಂಗೀತ ಶಿಕ್ಷಣ. ತಾಯಿಯವರ ಪ್ರಭಾವವೂ ಇವರ ಮೇಲೆ ಆಗಿದೆ. ದಿವಂಗತ ಹೀರಾಸಿಂಗ್ ಡಂಬಳ್ರವರ ಬಳಿ ಹಾರ್ಮೋನಿಯಂ ವಾದನದಲ್ಲಿ ಉನ್ನತ ತರಬೇತಿ. ಅನಂತರ ಧಾರವಾಡದ ಸುಪ್ರಸಿದ್ಧ ಸಂಗೀತ ನಿರ್ದೇಶಕರಾದ ಪಂ. ವಸಂತ್ ಕನಕಾಪುರರವರ ಬಳಿ ಸುಮಾರು ಎರಡು ದಶಕಗಳ ಕಾಲ ಶಿಷ್ಯವೃತ್ತಿ. ಆಕಾಶವಾಣಿ ಮತ್ತು ಟಿವಿ ವಾಹಿನಿಗಳ ಬಿ-ಹೈ ಶ್ರೇಣಿ ಕಲಾವಿದರು. ಮೀರಜ್ನ ಗಂಧರ್ವ ಮಹಾವಿದ್ಯಾಲಯದಿಂದ “ಸಂಗೀತ ಅಲಂಕಾರ್” ಮತ್ತು “ವಿದ್ವಾನ್” ಪರೀಕ್ಷೆಗಳಲ್ಲಿ ಉತ್ತೀರ್ಣರು. ಹಿಂದೂಸ್ತಾನಿ ಸಂಗೀತದ ಬಹುತೇಕ ದಿಗ್ಗಜರಿಗೆ ಹಾರ್ಮೋನಿಯಂ ಸಾಥ್ ನೀಡಿರುವ ಹೆಗ್ಗಳಿಕೆ.

ತಬಲಾ ಸಾಥ್ ನೀಡಲಿರುವ ಪಂ. ವಿಶ್ವನಾಥ ನಾಕೋಡರವರು ತಂದೆ ಪಂ. ಅರ್ಜುನಸಾ ನಾಕೋಡರವರಲ್ಲಿ ಗಾಯನ ತರಬೇತಿಯನ್ನು, ಪಂ. ವಸಂತ ಕನಕಾಪುರರವರಲ್ಲಿ ಸುಗಮ ಸಂಗೀತವನ್ನು ಅಭ್ಯಾಸ ಮಾಡಿದರು. ಸುಮಾರು ೪೦ ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ಕಲಾವಿದರಾಗಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳ “ಎ” ದರ್ಜೆ ಗಾಯಕರು. ಮಂತ್ರಾಲಯ, ತಿರುಪತಿ ಮತ್ತು ಬಸವ ಭವನದಲ್ಲಿ ವಾದನ ಸೇವೆ; ಸುತ್ತೂರಿನಲ್ಲಿ ವಚನ ಗಾಯನ. ಮಸ್ಕಿ, ಹುಬ್ಬಳ್ಳಿ-ಧಾರವಾಡ, ಉಡುಪಿ, ಚೆನ್ನೈ ಮುಂತಾದ ಕಡೆಗಳಲ್ಲಿ ದೇವರನಾಮ, ವಚನ, ಹಿಂದಿ ಭಜನ್ ಕಾರ್ಯಕ್ರಮಗಳನ್ನು ನೀಡಿ ಸಂಗೀತ ರಸಿಕರಿಂದ ಅಪಾರ ಪ್ರಶಂಸೆ ಪಡೆದಿದ್ದಾರೆ. ಇವರ ಹಲವಾರು ಧ್ವನಿಸುರುಳಿಗಳು ಜನಪ್ರಿಯತೆಯ ಮನ್ನಣೆ ಗಳಿಸಿವೆ. ಎಂಎ ಹಿಂದಿ ಪದವೀಧರರು. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ. ಹಲವಾರು ದಿಗ್ಗಜರಿಗೆ ಸಾಥ್ ನೀಡಿದ ಶ್ರೇಯಸ್ಸು. ವಿವಿಧ ರಾಷ್ಟ್ರಗಳಲ್ಲಿ ಸಂಗೀತಯಾನ. ಹತ್ತಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.