ಮನೆ ರಾಜ್ಯ ಉದ್ಯಾನ ನಗರಿಯ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ಜನವರಿ 26 ರಿಂದ ಹಾರಾಡಲಿದೆ ತ್ರಿವರ್ಣ ಧ್ವಜ

ಉದ್ಯಾನ ನಗರಿಯ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ಜನವರಿ 26 ರಿಂದ ಹಾರಾಡಲಿದೆ ತ್ರಿವರ್ಣ ಧ್ವಜ

0

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಿಂದ ಅತೀ ಎತ್ತರದ ರಾಷ್ಟ್ರಧ್ವಜ ಸ್ಥಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಿಗ್ಗೆ 8-30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ಥಂಭವನ್ನು ಲೋಕಾರ್ಪಣೆ ಮಾಡಿ, ಪ್ರಪ್ರಥಮ ಬಾರಿಗೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಂವಿಧಾನದ ಆಶಯಗಳಾದ ದೇಶ ಪ್ರೇಮ, ದೇಶ ಭಕ್ತಿ, ಸೋದರತೆ ಮತ್ತು ಸಾಮರಸ್ಯವನ್ನು ಉಳಿಸಿ ಬೆಳೆಸಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುವ ಈ ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

 ಸಮಾರಂಭದ ಪ್ರಾರಂಭಕ್ಕೆ ಮುನ್ನ, ಬೆಳಿಗ್ಗೆ 7-30 ಗಂಟೆಗೆ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾದ್ಯಗೋಷ್ಠಿ-ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿವೆ.

ಸಮಾರಂಭದ ನಂತರ, ಬೆಳಿಗ್ಗೆ 10-00 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಫ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಅರ್ಬುದ ರೋಗ ( ಕ್ಯಾನ್ಸರ್ ) ಉಚಿತ ತಪಾಸಣಾ ಶಿಬರವನ್ನೂ ಆಯೋಜಿಸಲಾಗಿದೆ.

ಸಂಜೆ 6-30 ಗಂಟೆಗೆ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದವರು ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ, ಲೇಸರ್ ಷೋ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಧ್ವಜಸ್ಥಂಭದ ವೈಶಿಷ್ಠ್ಯಗಳು !

ಸ್ಥಳೀಯ ಶಾಸಕ ಎಂ ಕೃಷ್ಣಪ್ಪ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಗಣರಾಜ್ಯೋತ್ಸವ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ನಿರ್ಮಿಸಿರುವ 215 ಅಡಿ ಎತ್ತರದ ಈ ರಾಷ್ಟ್ರಧ್ವಜಸ್ಥಂಭವು ಪ್ರಸ್ತುತ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ 213 ಅಡಿ ಧ್ವಜಸ್ಥಂಭಕ್ಕಿತಲೂ ಎರಡು ಅಡಿ ಹೆಚ್ಚು ಎತ್ತರದ್ದಾಗಿದೆ. ಹತ್ತೊಂಬತ್ತು ಟನ್ ತೂಕವಿರುವ ಕಂಬದ ಮೇಲ್ಭಾಗದಲ್ಲಿ ಐದು ಅಡಿಯ ಅಶೋಕ ಲಾಂಛನವಿದೆ. ಈ ಲಾಂಛನದಲ್ಲಿನ ನಾಲ್ಕು ಸಿಂಹಗಳು ಕೇವಲ ವಿಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗೆ ಮಾತ್ರವಲ್ಲ, ನೆರೆಯ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣುವುದು ಈ ಧ್ವಜಸ್ಠಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಈ ಧ್ವಜಸ್ಥಂಭದಲ್ಲಿ ರಾಷ್ಟ್ರಧ್ವಜವನ್ನು ಕೈಯಿಂದಲೂ ಹಾಗೂ ಯಾಂತ್ರಿಕವಾಗಿಯೂ ಏರಿಸಲು ಹಾಗೂ ಇಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಧ್ವಜಸ್ಥಂಭದ ಸುತ್ತ ನಿರ್ಮಿಸಿರುವ ಹುಲ್ಲು ಹಾಸು ಹಾಗೂ ವೈಭವೋಪೇತ ಕಲ್ಲು ಮೆಟ್ಟಿಲುಗಳು ಈ ಧ್ವಜಸ್ಥಂಭಕ್ಕೆ ವಿಶಿಷ್ಠ ಮೆರುಗು ನೀಡಲಿದೆ ಎಂದು ವಿಜಯನಗರದ ಯುವ ಮುಖಂಡ ಪ್ರದೀಪ್ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.