ಬಂಡೀಪುರ : ಬಂಡಿಪುರ ಅರಣ್ಯ ಪ್ರದೇಶದೊಳಗಿನ ರಸ್ತೆಯ ಮೂಲಕ ಕೇರಳದ ವೈನಾಡಿಗೆ ಹೋಗುವ ಮಾರ್ಗದಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ಗಂಟೆಯವರೆಗೆ ಸಂಚಾರ ನಿರ್ಬಂಧಿಸಿರುವ ಕುರಿತಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಖುದ್ದು ಪರಿಶೀಲನೆ ನಡೆಸಿದರು.
23ರ ಮಧ್ಯರಾತ್ರಿ 12 ಗಂಟೆಯಿಂದ 24ರ ನಸುಕಿನ 2 ಗಂಟೆಯವರೆಗೆ ಈ ಮಾರ್ಗವಾಗಿ ಕೇರಳದ ಗಡಿಯವರೆಗೂ ಅಧಿಕಾರಿಗಳೊಂದಿಗೆ ಪ್ರಯಾಣ ಮಾಡಿದ ಸಚಿವರು, ರಸ್ತೆಯನ್ನು ದಾಟುವ ಜಿಂಕೆಗಳು, ಆನೆಗಳನ್ನು ವೀಕ್ಷಿಸಿ, ಕರ್ನಾಟಕದ ಗಡಿಯೊಳಗಿನ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದರು.
ನಿತ್ಯ ಎಷ್ಟು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ, ರಾತ್ರಿಯ ವೇಳೆ ವಾಹನ ಸಂಚಾರದಿಂದ ಎಷ್ಟು ವನ್ಯಜೀವಿಗಳು ಮೃತಪಟ್ಟಿವೆ ಎಂಬ ಬಗ್ಗೆಯೂ ಮಾಹಿತಿ ಪಡೆದರು. ಈ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಕೇರಳದ ಬೇಡಿಕೆಯ ಕುರಿತಂತೆಯೂ ಅಧಿಕಾರಿಗಳ ಜೊತೆ ಸಮಾಲೋಚಿಸಿದರು.
ಚೆಕ್ ಪೋಸ್ಟ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ಸಚಿವರು, ಕುಂದುಕೊರತೆಯನ್ನೂ ಆಲಿಸಿದರು. ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ರಾತ್ರಿ 9ರ ನಂತರ ಆಂಬುಲೆನ್ಸ್ ಗಳಿಗೆ ಮತ್ತು ಕರ್ನಾಟಕದ 5 ಹಾಗೂ ಕೇರಳದ 5 ಬಸ್ ಗಳ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದ್ದು, ಉಳಿದಂತೆ ತೀರಾ ತುರ್ತು ಸನ್ನಿವೇಶದಲ್ಲಿ ಪ್ರಯಾಣಿಕರ ವಾಹನಗಳ ಪ್ರಯಾಣಿಕರ ವಿವರ ಪಡೆದು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಯಿತು.