ಹೈದರಾಬಾದ್: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳವು ಬುಧವಾರ ಸರ್ಕಾರಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದು, 100 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ವಶಕ್ಕೆ ಪಡೆದಿದೆ.
ಮೆಟ್ರೋ ರೈಲು ಯೋಜನಾಧಿಕಾರಿ ಹಾಗೂ ತೆಲಂಗಾಣ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ಟಿಎಸ್‌ಆರ್ ಇಆರ್ ಎ) ಕಾರ್ಯದರ್ಶಿಯಾಗಿರುವ ಎಸ್.ಬಾಲಕೃಷ್ಣ ಎಂಬವರ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಇದಕ್ಕೂ ಮುನ್ನ ಬಾಲಕೃಷ್ಣ, ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಹೆಚ್ ಎಂಡಿಎ) ನಗರ ಯೋಜನೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಒಟ್ಟು 14 ತಂಡಗಳಲ್ಲಿ ಎಸಿಬಿ ಶೋಧ ನಡೆಸಿದೆ. ಈ ಕಾರ್ಯಾಚರಣೆ ಇಂದು ಕೂಡಾ ಮುಂದುವರೆಯುವ ಸಾಧ್ಯತೆ ಇದೆ.
ಬಾಲಕೃಷ್ಣರ ಮನೆ ಮಾತ್ರವಲ್ಲದೆ, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ನಿನ್ನೆಯವರೆಗೆ ಸುಮಾರು 40 ಲಕ್ಷ ರೂಪಾಯಿ ನಗದು, 2 ಕೆ.ಜಿ ಚಿನ್ನ, ಚರ ಮತ್ತು ಸ್ಥಿರಾಸ್ತಿಗಳ ದಾಖಲೆಗಳು, 60 ದುಬಾರಿ ವಾಚ್ಗಳು, 14 ಮೊಬೈಲ್ ಫೋನ್‌ಗಳು ಮತ್ತು 10 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಲಕೃಷ್ಣ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಗಳಲ್ಲಿ ಲಾಕರ್ ಗಳನ್ನು ಗುರುತಿಸಿದ್ದು ಇನ್ನೂ ತೆರೆಯಲಾಗಿಲ್ಲ. ಮನೆಯಲ್ಲಿ ನಗದು ಎಣಿಕೆ ಯಂತ್ರಗಳೂ ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.