ಬೆಂಗಳೂರು: ರಾಜ್ಯದಲ್ಲಿ 75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.
ಬೆಳಗ್ಗೆ 9 ಗಂಟೆಗೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.
ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆಯ ಅವಕಾಶವನ್ನ ಒದಗಿಸಿದೆ. ಸಮಗ್ರತೆ, ಏಕತೆಯನ್ನ ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನ ಹೊಂದಿದೆ. ಸರ್ಕಾರವು 5 ಗ್ಯಾರೆಂಟಿಗಳನ್ನ ಜಾರಿಗೊಳಿಸುವ ಭರವಸೆ ನೀಡಿತ್ತು. ಅದರಂತೆ ಎಲ್ಲ ಐದು ಗ್ಯಾರೆಂಟಿಗಳನ್ನ ಅನುಷ್ಠಾನಗೊಳಿಸಲಾಗಿದೆ. ಶಕ್ತಿ & ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಮಾಸಿಕ ರೂ,2,000 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗೀಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು.
ಇದರ ಫಲವಾಗಿ ಇಂದು ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ. ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದ ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ.
ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಗ್ಯ, ಋಣಮುಕ್ತಭಾಗ್ಯ, ವಿದ್ಯಾಸಿರಿ, ಆರೋಗ್ಯಭಾಗ್ಯ, ಜಲಭಾಗ್ಯ ಕಾರ್ಯಕ್ರಮಗಳು ಕೂಡಾ ಯಶಸ್ವಿಯಾಗಿ ಜಾರಿಯಲ್ಲಿದೆ. ಇವೆಲ್ಲ ಯೋಜನೆಗಳು ದುಡಿಯುವ ಕೈಗಳನ್ನು ಇನ್ನಷ್ಟು ಬಲಪಡಿಸಿ ಅವುಗಳು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವಂತೆ ಮಾಡುವ ಕಾರ್ಯಕ್ರಮಗಳು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.2 ಕೋಟಿ ಕುಟುಂಬಗಳಿಗೆ ವಾರ್ಷಿಕ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯ ದೊರೆಯುತ್ತಿದೆ.
ಅಧಿಕಾರಕ್ಕೆ ಬಂದ ಕೂಡಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲು ಅನುವು ಮಾಡಿಕೊಟ್ಟ ಶಕ್ತಿ ಯೋಜನೆ ಅಭೂತಪೂರ್ವ ಜನಮನ್ನಣೆಗೆ ಪಾತ್ರವಾಗಿದೆ. 138 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿದ್ದಾರೆ. 1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ.ಗಳ ನೆರವು ನೀಡಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1.51 ಕೋಟಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಯುವನಿಧಿ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸುಮಾರು ಒಂದು ಲಕ್ಷ ಯುವಕ ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನಿರುದ್ಯೋಗ ಭತ್ಯೆಯನ್ನು ಪಡೆಯುವ ಅಭ್ಯರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷಾ ಶುಲ್ಕವನ್ನು ಭರಿಸಲು, ಉತ್ತಮ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಲು, ಉದ್ಯೋಗ ಸಂದರ್ಶನಕ್ಕೆ ತೆರಳುವ ವೆಚ್ಚಕ್ಕೆ, ಉದ್ಯಮಶೀಲತೆ ತರಬೇತಿ ಪಡೆಯುವ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಬಳಸಲೆಂದೇ ಈ ಯೋಜನೆ ಜಾರಿಯಾಗಿದೆ. ಯುವನಿಧಿಯ ಫಲಾನುಭವಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಅವರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಲು ಸಹ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧಿಗಳಿಂದ ವ್ಯಕ್ತವಾದ ಟೀಕೆ-ಟಿಪ್ಪಣಿ, ಅನುಮಾನ-ಆತಂಕಗಳನ್ನು ನಾವು ಗಮನಿಸಿದ್ದೇವೆ.
ನಮ್ಮ ಸರ್ಕಾರ ದಿವಾಳಿಯಾಗಲಿದೆ ಎಂಬ ಅಪಪ್ರಚಾರವನ್ನು ಮಾಡಿದ್ದಾರೆ. ಇಂತಹವರೆಲ್ಲರಿಗೂ ನಮ್ಮ ಯೋಜನೆಗಳ ಫಲಾನುಭವಿಗಳೇ ದಿಟ್ಟತನದಿಂದ ಉತ್ತರ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ. ನಾವು ಮಾತುಗಾರರಲ್ಲ, ಕೆಲಸಗಾರರು. ಚುನಾವಣೆಯ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ಮೊದಲ ಅಧಿವೇಶನದಲ್ಲಿಯೇ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜಮೀನು ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ಸಮುದಾಯಗಳ ಭೂ-ಒಡೆತನದ ಹಕ್ಕನ್ನು ಖಾತರಿಪಡಿಸಿದ್ದೇವೆ.
ಎಸ್.ಸಿ.ಎಸ್.ಪಿ/ಟಿ.ಎಸ್‍ಪಿ ಅಧಿನಿಯಮ 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳಿಗೇ ಬಳಕೆಯಾಗಬೇಕೆನ್ನುವುದು ಸರ್ಕಾರದ ಆಶಯ. ಈ ಬಗ್ಗೆ ದಲಿತ ಸಮುದಾಯಗಳ ದೀರ್ಘಕಾಲದ ಮನವಿಗೆ ಸರ್ಕಾರ ಸ್ಪಂದಿಸಿ ಕಾಯ್ದೆಯ ಕಲಂ 7 (ಡಿ) ಅನ್ನು ಕೈಬಿಡಲಾಗಿದೆ. ಹಿಂದುಳಿದ ಪ್ರವರ್ಗ-1 ಮತ್ತು ಪ್ರವರ್ಗ-2ಎ ಗಳಲ್ಲಿನ ಜಾತಿಗಳ ಜನರಿಗೆ ಕಾಮಗಾರಿಗಳ ಗುತ್ತಿಗೆಯಲ್ಲಿ 1 ಕೋಟಿ ರೂಗಳವರೆಗೆ ಮೀಸಲಾತಿ ನೀಡಲಾಗಿದೆ. ಇದು ಸಾಮಾಜಿಕ ನ್ಯಾಯದ ಬಂಡಿ ಮೇಲೆ ಅಭಿವೃದ್ದಿಯ ರಥವನ್ನು ಮುಂದಕ್ಕೆ ಒಯ್ಯುವ ನಮ್ಮ ಪ್ರಯತ್ನವಾಗಿದೆ.ಈ ಬಾರಿ ಹವಾಮಾನ ವೈಪರೀತ್ಯ, ಮಳೆಯ ತೀವ್ರ ಕೊರತೆಯಿಂದಾಗಿ, 236 ರಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಬರಗಾಲವನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ನಮ್ಮ ನಿರಂತರ ಪ್ರಯತ್ನದ ಹೊರತಾಗಿಯೂ ಬರಪರಿಹಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಬಿಡಿಗಾಸನ್ನೂ ನೀಡದಿರುವುದನ್ನು ವಿಷಾದದಿಂದ ಹೇಳಬೇಕಾಗಿದೆ. ರಾಜ್ಯ ಸರ್ಕಾರವೇ ಬರದಿಂದ ಬಾಧಿತರಾದವರಿಗೆ ಬೆಳೆ ಪರಿಹಾರವಾಗಿ 2000 ರೂ.ಗಳ ವರೆಗಿನ ತಾತ್ಕಾಲಿಕ ಪರಿಹಾರದ ಘೋಷಣೆಯನ್ನು ಮಾಡಿದ್ದು, ಈವರೆಗೆ 550 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
ವಾರದೊಳಗೆ ಮೊದಲ ಕಂತಿನ ಪರಿಹಾರ ರೈತರಿಗೆ ತಲುಪಿಸಲಾಗುವ ವ್ಯವಸ್ಥೆಯಾಗುತ್ತಿದೆ. ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಅಸಲು ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡಲು ನಮ್ಮ ಸರ್ಕಾರ ಆದೇಶ ಹೊರಡಿಸಿದೆ. ಕೊಬ್ಬರಿ ಬೆಲೆ ಕುಸಿತಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1500 ರೂಗಳ ನೆರವನ್ನು ರಾಜ್ಯ ಸರ್ಕಾರವೆ ನೀಡುತ್ತಿದೆ.
ನೆಟೆ ರೋಗದಿಂದ ಬಾಧಿತರಾದ ತೊಗರಿ ಬೆಳೆಗಾರರಿಗೆ 223 ಕೋಟಿ ರೂ ಪರಿಹಾರ ನೀಡಿದ್ದೇವೆ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ಪರಿಹಾರ ವಿಮೆ ಮತ್ತು ಸ್ಥಳ ನಿರ್ಧಿಷ್ಠ ವಿಕೋಪಗಳಿಗೆ ಪರಿಹಾರವಾಗಿ 8.10 ಲಕ್ಷ ರೈತರಿಗೆ 591 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿ ಮಾಡಲಾಗಿದೆ. ಸಾಮಾಜಿಕ ಬದಲಾವಣೆಗೆ ಶಿಕ್ಷಣ ಪ್ರಬಲ ಅಸ್ತ್ರ ಎಂದು ಡಾ: ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವವನ್ನು ನೀಡಿದೆ.
ಮಕ್ಕಳಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ರೀತಿಯಲ್ಲಿ ಪಠ್ಯಪುಸ್ತಕಗಳನ್ನು ರೂಪಿಸುತ್ತಿದ್ದೇವೆ. ಇದಲ್ಲದೆ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಸ್ಥಳೀಯ ಅವಶ್ಯಕತೆಗಳಿಗೆ ತಕ್ಕಂತೆ ಸುಧಾರಣೆಗೆ ಒಳಪಡಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಸುವ ಉದ್ದೇಶದಿಂದ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ತನ್ಮೂಲಕ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ಗುರಿ ನಮ್ಮದು.
75ನೇ ಗಣರಾಜ್ಯೋತ್ಸವದ ಆಚರಣೆಯ ಭಾಗವಾಗಿ ಜನವರಿ 26 ರಿಂದ ಒಂದು ತಿಂಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಸಂವಿಧಾನ ಜಾಗೃತಿ ಜಾಥಾ’ ನಡೆಸಲಾಗುತ್ತಿದ್ದು, ನಾಡಿನ ಜನತೆಗೆ ಸಂವಿಧಾನದ ಸ್ವರೂಪ ಹಾಗೂ ಆಶಯಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ. ನಾಗರಿಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಕೈಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಸರ್ಕಾರ ಜನರ ಮನೆಬಾಗಿಲಿಗೆ ತಲುಪಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಮೂಲೆಮೂಲೆಗಳಿಂದ ಸಮಸ್ಯೆಗಳನ್ನು ಹೊತ್ತು ತಂದುದನ್ನು ಗಮನಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಹೂಡಿಕೆದಾರ ಸ್ನೇಹಿ ನೀತಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ಈ ಬಾರಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಬಯೋಟೆಕ್ ನೀತಿ ಹಾಗೂ ಎವಿಜಿಸಿ ಪಾಲಿಸಿಯನ್ನು ಬಿಡುಗಡೆ ಮಾಡಲಾಗಿದೆ. ದಾವೋಸ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಲು ಎನ್ಟಿಟಿ ಡೇಟಾ, ಆ್ಯಬ್ ಸಮೂಹ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಉತ್ಸುಕತೆ ತೋರಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ.
ಬಸವಣ್ಣ ನಮ್ಮ ನಾಡಿನ ಸಾಮಾಜಿಕ ನ್ಯಾಯದ ಮೊದಲ ಹರಿಕಾರ. ಸಂವಿಧಾನದ ಆಶಯಗಳನ್ನು ಪ್ರತಿಪಾದಿಸುವ ಬಸವಮಾರ್ಗದಲ್ಲಿ ನಡೆಯುವವನು ನಾನು. ಈ ಬದ್ದತೆಯಂದಾಗಿಯೇ ನಮ್ಮ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕಂತಿಕ ನಾಯಕ ಎಂದು ಘೋಷಿಸಿದೆ ಎಂದು ತಿಳಿಸಿದರು.