ಮನೆ ರಾಷ್ಟ್ರೀಯ ಹುತಾತ್ಮ ದಿನ: ಪ್ರಧಾನಿ ಮೋದಿ, ಮಲ್ಲಿಕಾರ್ಜುನ್ ಖರ್ಗೆಯಿಂದ ಗೌರವ ನಮನ

ಹುತಾತ್ಮ ದಿನ: ಪ್ರಧಾನಿ ಮೋದಿ, ಮಲ್ಲಿಕಾರ್ಜುನ್ ಖರ್ಗೆಯಿಂದ ಗೌರವ ನಮನ

0

ನವದೆಹಲಿ: ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗೌರವ ನಮನ ಸಲ್ಲಿಸಿದ್ದಾರೆ.

ಪೂಜ್ಯ ಬಾಪು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗಗಳು ನಮಗೆ ಜನರ ಸೇವೆ ಮಾಡಲು ಮತ್ತು ನಮ್ಮ ರಾಷ್ಟ್ರಕ್ಕಾಗಿ ಅವರ ದೃಷ್ಟಿಕೋನವನ್ನು ಪೂರೈಸಲು ಸ್ಫೂರ್ತಿ ನೀಡುತ್ತವೆ ಎಂದು ಎಕ್ಸ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿಯವರ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುವ ಮತ್ತೊಂದು ಎಕ್ಸ್ ಹ್ಯಾಂಡಲ್, @modiarchive’ನಲ್ಲಿ ಗಾಂಧಿಯವರ ಉಲ್ಲೇಖಗಳನ್ನು ಹೊಂದಿರುವ ಮೋದಿಯವರ ವೈಯಕ್ತಿಕ ಡೈರಿಯಿಂದ ಕೆಲವು ಪುಟಗಳನ್ನು ಪೋಸ್ಟ್ ಮಾಡಲಾಗಿದೆ.

1948ರಲ್ಲಿ ಇದೇ ದಿನ ನಾಥೂರಾಂ ಗೋಡ್ಸೆಯಿಂದ ಗಾಂಧಿ ಹತ್ಯೆಯಾಯಿತು. ಗಾಂಧೀಜಿಯವರ ಪುಣ್ಯ ಸ್ಮರಣೆಯ ದಿನವನ್ನು ಹುತಾತ್ಮರ ದಿನವೆಂದೂ ಆಚರಿಸಲಾಗುತ್ತದೆ.

ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವವರಿಗೆ ಭಾರತದ ಕಲ್ಪನೆಯನ್ನು ವ್ಯಾಖ್ಯಾನಿಸಲು ಬಿಡಬಾರದು ಮತ್ತು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ದ್ವೇಷದ ಬಿರುಗಾಳಿಯಲ್ಲಿ ಸತ್ಯ ಮತ್ತು ಸಾಮರಸ್ಯದ ಜ್ವಾಲೆಯನ್ನು ನಂದಿಸಲು ಬಿಡದಿರುವುದೇ ರಾಷ್ಟ್ರಪಿತನಿಗೆ ನಿಜವಾದ ಗೌರವ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಶತ್ರು ಎಂದರೆ ಭಯ, ನಾವು ಅದನ್ನು ದ್ವೇಷ ಎಂದು ಭಾವಿಸುತ್ತೇವೆ. ಆದರೆ, ಅದು ಭಯ ಎಂದು ಗಾಂಧೀಜಿಯವರ ವ್ಯಾಖ್ಯಾನವನ್ನು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಎಕ್ಸ್ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

ಹುತಾತ್ಮರ ದಿನದಂದು, ನಮ್ಮ ರಾಷ್ಟ್ರದ ನೈತಿಕ ದಿಕ್ಸೂಚಿಯಾದ ಬಾಪು ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಸಂಭವ ಮತ್ತು ಸರ್ವೋದಯದ ಆಧಾರವಾದ ಅವರ ಆದರ್ಶಗಳನ್ನು ನಾಶಮಾಡಲು ಪ್ರಯತ್ನಿಸುವವರ ವಿರುದ್ಧ ನಾವು ಹೋರಾಡಲು ಪ್ರತಿಜ್ಞೆ ಮಾಡಬೇಕು ಎಂದು ಖರ್ಗೆ ಹೇಳಿದ್ದಾರೆ.

ವಿವಿಧತೆಯಲ್ಲಿ ಏಕತೆಯ ಭಾರತವನ್ನು ರಕ್ಷಿಸಲು ಮತ್ತು ನಮ್ಮ ಜನರಲ್ಲಿ ನ್ಯಾಯ, ಸಮಾನತೆ ಮತ್ತು ಭ್ರಾತೃತ್ವವನ್ನು ಖಚಿತಪಡಿಸಿಕೊಳ್ಳಲು ಬೇಕಾದ ಎಲ್ಲವನ್ನೂ ಮಾಡೋಣ ಎಂದು ಅವರು ಹೇಳಿದ್ದಾರೆ.

ಇದೇ ದಿನ ದ್ವೇಷ ಮತ್ತು ಹಿಂಸೆಯ ಸಿದ್ಧಾಂತವು ಪೂಜ್ಯ ಬಾಪು ಅವರನ್ನು ದೇಶದಿಂದ ಕಿತ್ತುಕೊಂಡಿತ್ತು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಿಂದಿ ಭಾಷೆಯಲ್ಲಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಅದೇ ಚಿಂತನೆಯು ಅವರ ತತ್ವಗಳು ಮತ್ತು ಆದರ್ಶಗಳನ್ನು ನಮ್ಮಿಂದ ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.