ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎನ್ ಚಲುವರಾಯಸ್ವಾಮಿ ಮಾಡಿರುವ ಆರೋಪಗಳಿಗೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ದ ಗೌರಿ ಶಂಕರ್ ಸೇವಾ ಟ್ರಸ್ಟ್, ಯಾವ ಧ್ವಜ ಅಂತ ಹೇಳಿರಲಿಲ್ಲ. ಅದಕ್ಕೆ ಅನುಮತಿ ನೀಡಲಾಗಿತ್ತು. ಈಗ ಸರ್ಕಾರವೇ ನಕಲಿ ದಾಖಲೆ ಸರ್ಕಾರ ಸೃಷ್ಟಿ ಮಾಡಿಕೊಂಡು ಆರೋಪ ಮಾಡುತ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಗೌರಿ ಶಂಕರ್ ಟ್ರಸ್ಟ್ಗೆ ನವೆಂಬರ್ ತಿಂಗಳಲ್ಲಿ ಅನುಮತಿ ನೀಡಲಾಗಿತ್ತು. ಇಂಥದ್ದೇ ಧ್ವಜ ಎಂದು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. 2023ರ ಡಿಸೆಂಬರ್ 29ರಂದು ಮತ್ತೆ ಹೊಸ ಅರ್ಜಿ ತೆಗೆದುಕೊಂಡಿದ್ದಾರೆ. ಅದನ್ನು ತಿದ್ದಿಕೊಂಡಿದ್ದಾರೆ. ಇದರಲ್ಲಿ ತ್ರಿವರ್ಣ ಧ್ವಜ, ಕನ್ನಡ ಧ್ವಜ ಹಾಕಲು ಅನುಮತಿ ನೀಡಿದ್ದೇವೆ ಎಂದಿದೆ. ಜನವರಿ ತಿಂಗಳಲ್ಲಿ ಪತ್ರ ಸೃಷ್ಟಿ ಮಾಡಿಕೊಳ್ಳಲಾಗಿದೆ. ಮುಚ್ಚಳಿಕೆಯಲ್ಲಿರುವ ಹೆಸರು, ಅರ್ಜಿಗಳಲ್ಲಿ ಬೇರೆ ಹೆಸರುಗಳು ಇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೆಂಪೇಗೌಡ, ಕುವೆಂಪು ಪ್ರತಿಮೆ ಸ್ಥಾಪನೆ ಸಂಬಂಧ ಅರ್ಜಿ ಹಾಕಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ. 5/1 ಕ್ಕೆ ಒಂದು ಷರತ್ತು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಸೋಮವಾರದ ಭಾಷಣದಲ್ಲಿ ಬೆಂಕಿ ಹಚ್ಚಿ, ಫ್ಲೆಕ್ಸ್ ಹರಿಯಿರಿ ಅಂತ ಹೇಳಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಆಗ್ರಹಿಸಿದ್ದೆ ಅಷ್ಟೆ. ಕೆರೆಗೋಡಿನ ಜನತೆ ಜನವರಿ 26 ರಂದು ರಾಷ್ಟ್ರ ಧ್ವಜ ಹಾರಿಸಿದ್ದಾರೆಯೇ ವಿನಃ ಸರ್ಕಾರ ಅಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಈ ಗಲಾಟೆ ಆರಂಭ ಆಗಿದೆ ಎಂದು ಅವರು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ನಮಸ್ಕಾರ. ನಾನು ನಿಮ್ಮಿಂದ ಕಲಿಯಬೇಕಾ? 200 ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ನೀವು ಒಂದು ರೂಪಾಯಿ ಕೂಡ ಬಿಚ್ಚಿಲ್ಲ. ನನ್ನ ದುಡಿಮೆ ಹಣ ಕೊಟ್ಟು ಬಂದಿದ್ದೇನೆ. ಅದೂ ಸಹ ವರ್ಗಾವಣೆ ದಂಧೆಯಿಂದ ಬಂದ ಹಣ ಅಲ್ಲ. ನಿಮ್ಮಿಂದ ವಿನಯ ಕಲಿಯಬೇಕಿಲ್ಲ. ನಾನು ಜಿಲ್ಲೆ ಹಾಳು ಮಾಡೋಕೆ ಬಂದಿದ್ದೇನೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕೇಸರಿ ಶಾಲು ಹಾಕುವುದು ತಪ್ಪೇ
ಪಾಪ ಹಳೆಯ ಸ್ನೇಹಿತರು (ಚಲುವರಾಯಸ್ವಾಮಿ) ಹೇಳಿದ್ದಾರೆ, ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಜೆಡಿಎಸ್ ಕಾರ್ಯಕರ್ತರ ಶಕ್ತಿ ಕೊನೆಗೊಳಿಸಲು ಹೊರಟಿದ್ದಾರೆ ಎಂದು. ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾನ್ ಅಪರಾಧವಾ? ಕಾಂಗ್ರೆಸ್ನವರಿಗೆ ಕೇಸರಿ ಮೇಲೆ ಯಾಕೆ ಸಂಕುಚಿತ ಮನೋಭಾವ? ಮಂಡ್ಯ ಉಸ್ತುವಾರಿ ಸಚಿವರಿಂದ ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿಲ್ಲ. ನನಗೆ ಜನ ಕೊಟ್ಟಿರುವ ಪ್ರೀತಿ ಇದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.