ಏಷ್ಯನ್ ಕ್ರಿಕೆಟ್ ಕೌನ್ಸಿಲ್ ( ಎಸಿಸಿ) ಅಧ್ಯಕ್ಷರಾಗಿ ಜಯ್ ಶಾ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ಬುಧವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಈ ಸಭೆಯಲ್ಲಿ ಶ್ರೀಲಂಕಾ ಕ್ರಿಕೆಟ್ (ಎಸ್ ಎಲ್ ಸಿ) ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಜಯ್ ಶಾ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.
ಈ ನಾಮನಿರ್ದೇಶನವನ್ನು ಎಸಿಸಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಇದರೊಂದಿಗೆ ಜಯ್ ಶಾ ಮೂರನೇ ಬಾರಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. ಜನವರಿ 2021 ರಲ್ಲಿ ಜಯ್ ಶಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ನಜ್ಮುಲ್ ಹಸನ್ ಅವರಿಂದ ಎಸಿಸಿಯ ಆಡಳಿತವನ್ನು ವಹಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು 2 ಬಾರಿ ಮರು ನೇಮಕ ಮಾಡಲಾಗಿದೆ.
ಜಯ್ ಶಾ ಅವರ ಮುಂದಾಳತ್ವದಲ್ಲಿ ACC 2022 ರಲ್ಲಿ ಟಿ20 ಮತ್ತು 2023 ರಲ್ಲಿ ಏಕದಿನ ಏಷ್ಯಾ ಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಸಂದಿಗ್ಧ ಸ್ಥಿತಿಯಲ್ಲೂ ಏಷ್ಯಾಕಪ್ ಆಯೋಜಿಸಲು ಯಶಸ್ವಿಯಾಗಿರುವ ಶಾ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ಇತರೆ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದೆ. ಹೀಗಾಗಿ ಜಯ್ ಶಾ ಅವರು ಸತತ ಮೂರನೇ ಅವಧಿಗೆ ಎಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.