ಇಂಧನ ಸಚಿವ ಕೆ.ಜೆ. ಜಾರ್ಜ್ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ
ಬೆಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮ್ಮುಖದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಅಧಿಕಾರ ಸ್ವೀಕರಿಸಿದರು.
ನಾಗರಬಾವಿಯಲ್ಲಿರುವ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಕೇಂದ್ರ ಕಚೇರಿಯಲ್ಲಿ ಕೆ.ಜೆ. ಜಾರ್ಜ್ ಅವರು ರಾಜೇಗೌಡ ಅವರಿಗೆ ಬುಧವಾರ ಅಧಿಕಾರ ಹಸ್ತಾಂತರಿಸಿದರು. ಒಟ್ಟು 36 ಶಾಸಕರಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ಸ್ಥಾನ ಸಿಕ್ಕಿದ್ದು, ರಾಜೇಗೌಡ ಅವರು ಕ್ರೆಡಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ರಾಜೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಚಿವ ಜಾರ್ಜ್, “ಶೃಂಗೇರಿಯ ಜನಪ್ರಿಯ ಶಾಸಕರಾದ ರಾಜೇಗೌಡ ಅವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನವೀಕರಿಸಬಹುದಾದದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅವರು ಉತ್ತಮ ಸಾಧನೆ ಮಾಡುವ ಭರವಸೆ ಇದೆ,”ಎಂದರು.
ವಿಶ್ವಾಸಕ್ಕೆ ಋಣಿ
“ಇಂಧನ ಸಚಿವರು ನಿಭಾಯಿಸುತ್ತಿದ್ದ ಹೊಣೆಯನ್ನು ನನಗೆ ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಾರ್ಜ್ ಅವರ ವಿಶ್ವಾಸಕ್ಕೆ ನಾನು ಋಣಿ. ನನ್ನ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ, ಇಂಧನ ಸಚಿವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತೇನೆ,”ಎಂದು ರಾಜೇಗೌಡ ಭರವಸೆ ವ್ಯಕ್ತಪಡಿಸಿದರು.
ನಂ 1 ಸ್ಥಾನದ ಗುರಿ
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, “ನವೀಕರಿಸಬಹುದಾದ ಇಂಧನ ವಲಯದಲ್ಲಿ ನಮ್ಮ ರಾಜ್ಯ 4ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೇರಬೇಕೆಂದು ಇಂಧನ ಸಚಿವರು ನಿರ್ದೇಶಿಸಿದ್ದಾರೆ. ಕ್ರೆಡಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ರಾಜೇಗೌಡ ಅವರ ಮುಂದಾಳತ್ವದಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ತರುವ ಎಲ್ಲ ಪ್ರಯತ್ನ ಮಾಡುತ್ತೇವೆ,” ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಬಿ.ಎಲ್. ಶಂಕರ್ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.