ಬೆಂಗಳೂರು: ಮಂಡ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಮತ್ತು ಜೆಡಿಎಸ್ ಗೆ ಸಾಧ್ಯವಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಹನುಮ ಧ್ವಜ ಇಳಿಸಿರುವ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದ ಶಾಂತಿ ಕದಡಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ಯತ್ನ ನಡೆಯುತ್ತಿದೆ. ಶಾಂತಿ ಕದಡಬೇಡಿ ಎಂದು ಅಲ್ಲಿನ ಸಾರ್ವಜನಿಕರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯವರಿಗೆ ಮನವಿ ಮಾಡಿದ್ದಾರೆ. ಶಾಂತಿ ಸಭೆಗೆ ಸಂಘ-ಸಂಸ್ಥೆಗಳನ್ನು ಕರೆದಿದ್ದೇವೆ. ಇರುವಂತ ಸಮಸ್ಯೆಗಳಿಗೆ ಹಾಗೂ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತೇವೆ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಮತ್ತು ಕುಮಾರಸ್ವಾಮಿ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಚಲುವರಾಯಸ್ವಾಮಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಬೆಳೆದವರು ಎಂಬ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾನು ಯಾರಿಂದ ಹೇಗೆ ಬಂದೆ ಎಂದು ನನ್ನ ಇತಿಹಾಸ ಓದಲು ಹೇಳಿ. ಮಂಡ್ಯ ದೇವೇಗೌಡರ ಕುಟುಂಬಕ್ಕೆ ಸಹಾಯ ಮಾಡಿದ್ಯಾ? ಅಥವಾ ದೇವೇಗೌಡರ ಕುಟುಂಬಕ್ಕೆ ಮಂಡ್ಯ ಸಹಾಯ ಮಾಡಿದ್ಯಾ? ಎಂದು ಇತಿಹಾಸವನ್ನು ನೋಡಲಿ ಎಂದು ಸಚಿವರು ತಿರುಗೇಟು ನೀಡಿದರು.
ಮಂಡ್ಯ ಗಲಭೆಗೆ ಯಾರೋ ಒಬ್ಬರ ಅಹಂ ಕಾರಣ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಸುಮಲತಾ ಮಂಡ್ಯ ಜಿಲ್ಲೆಯ ಜನರಿಗೆ ಸಲಹೆ ನೀಡುವ ಅಗತ್ಯ ಇಲ್ಲ. ಚುನಾವಣೆಗೆ ಟಿಕೆಟ್ ಗಾಗಿ ಬಿಜೆಪಿಯನ್ನು ಓಲೈಸಲು ಈ ರೀತಿಯ ಹೇಳಿಕೆ ಕೊಡುವ ಅಗತ್ಯ ಇಲ್ಲ ಎಂದರು.
ಕೇಂದ್ರದ ಬಜೆಟ್ ವಿಚಾರವಾಗಿ ಮಾತನಾಡಿದ ಚಲುವರಾಯಸ್ವಾಮಿ, ಕೇಂದ್ರದ ಬಜೆಟ್ ಚುನಾವಣೆ ಬಜೆಟ್ ಅಷ್ಟೇ. ಕರ್ನಾಟಕದ ಬಜೆಟ್ ನ್ನು ಫಾಲೋ ಮಾಡುವ ಸ್ಥಿತಿ ಇದೆ. ಹತ್ತು ವರ್ಷ ಏನು ಮಾಡಲು ಸಾಧ್ಯವಾಗದೆ ಇರುವವರು ಇವಾಗ ಮಾಡುತ್ತಾರೆ. ಕೃಷಿ ಇಲಾಖೆಗೆ ಹೆಚ್ಚು ಒತ್ತು ಕೊಟ್ಟರೆ ಅಭಿನಂದನೆ ಮಾಡುತ್ತೇನೆ. ಬರ ಪರಿಹಾರಕ್ಕೆ ಮನವಿ ಮಾಡಿದರೂ ಪರಿಹಾರ ಈವರೆಗೆ ನೀಡಿಲ್ಲ. 50 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆದರೂ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.