ಮನೆ ಕಾನೂನು ಸಿಬಿಐಗೆ ಆರ್‌ ಟಿಐನಿಂದ ಪೂರ್ಣ ವಿನಾಯಿತಿ ಇಲ್ಲ; ಭ್ರಷ್ಟತೆಯಂತಹ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕು: ದೆಹಲಿ...

ಸಿಬಿಐಗೆ ಆರ್‌ ಟಿಐನಿಂದ ಪೂರ್ಣ ವಿನಾಯಿತಿ ಇಲ್ಲ; ಭ್ರಷ್ಟತೆಯಂತಹ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕು: ದೆಹಲಿ ಹೈಕೋರ್ಟ್‌

0

ಮಾಹಿತಿ ಹಕ್ಕು ಕಾಯಿದೆಯಿಂದ (ಆರ್‌ ಟಿಐ) ಕೇಂದ್ರ ತನಿಖಾ ಸಂಸ್ಥೆಯಾಗಿರುವ ಸಿಬಿಐ ಸಂಪೂರ್ಣ ಹೊರತಲ್ಲ. ಕಾಯಿದೆಯಡಿ ಮಾಹಿತಿ ಕೋರಿದಾಗ ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಯನ್ನು ಅದು ಒದಗಿಸಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ.

ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಆರ್‌ ಟಿಐ ಕಾಯಿದೆಯ ಎರಡನೇ ಅನುಸೂಚಿಯಡಿ (ಆರ್‌ ಟಿಐ ಕಾಯಿದೆಯಿಂದ ವಿನಾಯಿತಿ ಪಡೆದ ಸಂಸ್ಥೆಗಳು) ಪಟ್ಟಿ ಮಾಡಲಾಗಿದ್ದರೂ ಅಂತಹ ಸಂಸ್ಥೆಗಳಿಗೆ ಇಡೀ ಕಾಯಿದೆಯೇ ಅನ್ವಯವಾಗುವುದಿಲ್ಲ ಎಂದರ್ಥವಲ್ಲ ಎಂದು ಜನವರಿ 30 ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ಸ್ಪಷ್ಡಪಡಿಸಿದೆ.

ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಕಾಯಿದೆಯ ಸೆಕ್ಷನ್ 24 ತಿಳಿಸಲಿದ್ದು ಆರ್‌ಟಿಐ ಕಾಯಿದೆಯ ಎರಡನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಸಂಸ್ಥೆಗಳಿಗೆ ಒದಗಿಸಲಾದ ವಿನಾಯಿತಿಯಲ್ಲಿ ಅದನ್ನು ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಮಾನವ ಹಕ್ಕು ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಬಗ್ಗೆ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸಲು ಅನುಮತಿಸುವುದು ಈ ಸೆಕ್ಷನ್‌ ನ ಉದ್ದೇಶ ಎಂದು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅಭಿಪ್ರಾಯಪಟ್ಟರು.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸಂಜೀವ್ ಚತುರ್ವೇದಿ ಅವರಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಈ ಆದೇಶದ ಮೂಲಕ ಸಿಬಿಐಗೆ ಸೂಚಿಸಿದೆ.

ಏಮ್ಸ್‌ ನ ಜಯಪ್ರಕಾಶ ನಾರಾಯಣ್‌ ಅಪೆಕ್ಸ್‌ ಟ್ರಾಮಾ ಕೇಂದ್ರದಲ್ಲಿ ಸೋಂಕುನಿವಾರಕಗಳು ಮತ್ತು ದ್ರಾವಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಏಮ್ಸ್‌ನ ಮುಖ್ಯ ವಿಚಕ್ಷಣಾಧಿಕಾರಿಯಾಗಿದ್ದ ಚತುರ್ವೇದಿ ಅವರು ಈ ಸಂಬಂಧ ಸಿಬಿಐ ನಡೆಸಿದ ತನಿಖೆ ಕುರಿತ ಮಾಹಿತಿಯನ್ನು ಆರ್‌ ಟಿಐ ಕಾಯಿದೆಯಡಿ ಕೋರಿದ್ದರು.

ಸಿಬಿಐ ಮಾಹಿತಿ ನೀಡಲು ನಿರಾಕರಿಸಿದ್ದರೂ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ವಿವರಗಳನ್ನು ಒದಗಿಸುವಂತೆ ಸಿಬಿಐಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿತ್ತು.