ಮನೆ ರಾಜ್ಯ ಆರೋಗ್ಯ-ಸ್ವಚ್ಛತೆ-ನೈರ್ಮಲ್ಯಕ್ಕೆ ಅವಿನಾಭಾವ ಸಂಬoಧ: ದಿನೇಶ್ ಗುಂಡೂರಾವ್

ಆರೋಗ್ಯ-ಸ್ವಚ್ಛತೆ-ನೈರ್ಮಲ್ಯಕ್ಕೆ ಅವಿನಾಭಾವ ಸಂಬoಧ: ದಿನೇಶ್ ಗುಂಡೂರಾವ್

0

ಮೈಸೂರು: ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವ ತಮ್ಮೆಲ್ಲರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿ ಪ್ರಶಸ್ತಿ ಪಡೆಯಬೇಕೆಂಬುವವರಿಗೆ ಪ್ರೇರಣೆಯಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.

 ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಂದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಜೆ.ಕೆ.ಮೈದಾನ ಪ್ಲಾಟಿನಮ್ ಜ್ಯುಬಿಲಿ ಹಾಲ್‌ನಲ್ಲಿ ನಡೆದ ಸರ್ಕಾರಿ ಆಸ್ಪತ್ರೆಗಳ ಸ್ವಚ್ಚತೆ,ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡಲಾಗುವ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ಮನೆ ಕಚೇರಿಗಳನ್ನು ಹೇಗೆ ಸ್ವಚ್ಛ ವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ನಾವು ಸೇವೆ ಒದಗಿಸುವ ಆಸ್ಪತ್ರೆಗಳನ್ನು ಜನಸ್ನೇಹಿಯಾಗಿಡುವ ಮೂಲಕ ಇಲಾಖೆಯನ್ನ ರಾಷ್ಟ್ರಮಟ್ಟದಲ್ಲಿ ಮಂಚೂಣಿಗೆ ಬರುವಂತೆ ನೋಡಿಕೊಳ್ಳೋಣ ಎಂದರು.

 ವಿವಿಧ ಮಾನದಂಡಗಳಡಿ ಆಸ್ಪತ್ರೆಗಳನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಶೇ,70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಆಸ್ಪತ್ರೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಆರೋಗ್ಯ ಇಲಾಖೆಯಡಿ ಬರುವ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ವಚ್ಚತೆ ಹಾಗೂ ನೈರ್ಮಲ್ಯದ ಕಡೆಗೆ ವಿಶೇಷ ಕಾಳಜಿವಹಿಸಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ ನೀಡುವುದನ್ನೂ ಪರಿಗಣಿಸಲಾಗುತ್ತದೆ ಎಂದರು.

 ಮೈಸೂರಿನ ಆಸ್ಪತ್ರೆಗಳ ಗುಣಮಟ್ಟ ತುಂಬಾ ಹಿಂದಿರುವುದು ಕಂಡುಬoದಿದ್ದು ಶೇಕಡಾ 10 ರಷ್ಟು ಆಸ್ಪತ್ರೆಗಳು ಮಾತ್ರ 75 ಶೇಕಡಾ ಅಂಕ ಪಡೆದಿವೆ, ಇದು ಮುಖ್ಯ ಮಂತ್ರಿಗಳ ಜಿಲ್ಲೆ, ರಾಜ್ಯ ಕೇಂದ್ರಕ್ಕೆ ಹತ್ತಿರವಿರುವ ಜಿಲ್ಲೆ, ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ, ಇದು ಆಡಳಿತ ವ್ಯವಸ್ಥೆಯ ವೈಖರಿಯನ್ನು ಸೂಚಿಸುತ್ತದೆ, ಮುಂದಿನ ದಿನಗಳಲ್ಲಿ ಜಿಲ್ಲಾ ಆರೋಗ್ಯ ಕ್ಷೇತ್ರ ಉತ್ತಮ ಸಾಧನೆ ತೋರಬೇಕೆಂದರು.

 ರಾಜ್ಯದ 2 ಸಾವಿರ ಆಸ್ಪತ್ರೆಗಳಿಗೆ ವಿವಿಧ ಹಂತಗಳಲ್ಲಿ ಪ್ರಶಸ್ತಿಗಳು ಬಂದಿದ್ದು, ಉಳಿದ ರಾಜ್ಯದ ಎಲ್ಲಾ ಆಸ್ಪತ್ರೆಗಳು ನಿಗದಿತ ಮಾನದಂಡಗಳನ್ನು ಪೂರೈಸಲೇಬೇಕೆಂದರು. ಪ್ರಮುಖವಾಗಿ ನಮ್ಮ ಸೇವೆ ಚನ್ನಾಗಿರಬೇಕು. ನಾವು ಬಡವರ ಹಾಗೂ ಸರ್ಕಾರದ ಕೆಲಸ ಮಾಡುತ್ತಿದ್ದೇವೆಂಬ ದೃಷ್ಟಿಯಿಂದ ಕೆಲಸ ಮಾಡಬೇಕು. ರಾಜ್ಯವನ್ನು ಆರೋಗ್ಯ ಕ್ಷೇತ್ರದಲ್ಲಿ ಮುಂದಿರುವoತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

 ಶಾಸಕರಾದ ಹರೀಶ್ ಗೌಡ ಮಾತನಾಡಿ ಕೆ.ಆರ್.ಆಸ್ಪತ್ರೆ ರಾಜ್ಯದ ಅತ್ಯಂತ ಹಳೇ ಆಸ್ಪತ್ರೆ ಆಗಿದ್ದು, ಲಕ್ಷಾಂತರ ರೋಗಿಗಳಿಗೆ ಸೇವೆ ನೀಡಿದೆ. ಸದ್ಯ ಆಸ್ಪತ್ರೆ ಮತ್ತು ಕಾಲೇಜು ಆವರಣ 89 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳ್ಳುತಿದ್ದು, ಸ್ವಚ್ಚತೆ ಸೇವೆ ನೀಡುವಲ್ಲಿ ಸಿಬ್ಬಂದಿಗಳು ಮುಂದಾಗಲಿ ಎಂದರು.

 ಸಮಾರoಭದಲ್ಲಿ ಶಾಸಕರಾದ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಎನ್.ಎಚ್.ಆರ್.ಸಿ ಸಲಹೆಗಾರರಾದ ಶ್ರೀವಾಸ್ತವ, ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್, ಅನಿಲ್ ಕುಮಾರ್,ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ವಿವಿಧ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.