ಮನೆ Uncategorized ಜೌಗುಭೂಮಿಗಳ ಅಧಿಕೃತ ಘೋಷಣೆಗೆ ಕ್ರಮ : ಈಶ್ವರ ಖಂಡ್ರೆ ಸೂಚನೆ

ಜೌಗುಭೂಮಿಗಳ ಅಧಿಕೃತ ಘೋಷಣೆಗೆ ಕ್ರಮ : ಈಶ್ವರ ಖಂಡ್ರೆ ಸೂಚನೆ

0

ಬೆಂಗಳೂರು, ಫೆ.8: ರಾಜ್ಯದಲ್ಲಿ 2.25 ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶವುಳ್ಳ ಕೆರೆ, ಕುಂಟೆಗಳ 16,700ಕ್ಕೂ ಅಧಿಕ ಜೌಗು ಭೂಮಿ ತಾಣಗಳನ್ನು ಗುರುತಿಸಲಾಗಿದ್ದು, ಇವುಗಳ ಅಧಿಕೃತ ಘೋಷಣೆಗೆ ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.


ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಕರ್ನಾಟಕ ಜೌಗು ಭೂಮಿ ಪ್ರಾಧಿಕಾರದ ಅನೌಪಚಾರಿಕ ಸಭೆಯಲ್ಲಿ ಅವರು, ಗುರುತಿಸಲಾಗಿರುವ ಜೌಗು ಭೂಮಿಗಳ ಪಟ್ಟಿಯನ್ನು ಅಂತರ್ಜಾಲ ತಾಣದಲ್ಲಿ ಅಧಿಕೃತವಾಗಿ ಪ್ರಕಟಿಸುವಂತೆ ತಿಳಿಸಿದರು.
2017ರಲ್ಲಿ ಕೇಂದ್ರ ಸರ್ಕಾರ ಜೌಗು ಪ್ರದೇಶ ಘೋಷಣೆ ಮತ್ತು ಅಭಿವೃದ್ದಿಗೆ ಮಾನದಂಡಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದು, ಈವರೆಗೆ ರಾಜ್ಯದಲ್ಲಿ ಜೌಗು ಭೂಮಿಯ ಅಧಿಕೃತ ಪ್ರಕಟಣೆ ಆಗದೆ ವಿಳಂಬವಾಗಿದೆ. ಈಗ ತತ್ ಕ್ಷಣವೇ ತಜ್ಞರ ತಂಡ ರೂಪಿಸಿ ಸಾಧಕ ಬಾಧಕ ಚರ್ಚಿಸಿ ಘೋಷಣೆ ಮಾಡುವಂತೆ ತಿಳಿಸಿದರು.
ಅಂತರ್ಜಾಲ ತಾಣದಲ್ಲಿ ಸಾರ್ವಜನಿಕರಿಗೆ ಜೌಗು ಪ್ರದೇಶ ಘೋಷಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ, ಕಾಯಿದೆ, ನಿಯಮ ನಿಬಂಧನೆಗಳ ಕುರಿತಂತೆ ಹಾಗೂ ಜೌಗು ಭೂಮಿಯಲ್ಲಿ ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಿಸುವ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟಿಸುವಂತೆ ಸೂಚಿಸಿದರು.
ರಾಜ್ಯದ 4 ತಾಣಗಳನ್ನು ರಾಮ್ಸರ್ ತಾಣಗಳೆಂದು ಘೋಷಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಹತ್ತು ದಿನಗಳ ಒಳಗಾಗಿ ಕ್ರಿಯಾ ಯೋಜನೆಯನ್ನು ರೂಪಿಸಿ, ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ಕರೆಯಲು ಕರ್ನಾಟಕ ಜೌಗು ಭೂಮಿ ಪ್ರಾಧಿಕಾರದ ಅಧ್ಯಕ್ಷರೂ ಆದ ಈಶ್ವರ ಖಂಡ್ರೆ ತಿಳಿಸಿದರು.