ಮನೆ ರಾಷ್ಟ್ರೀಯ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ: ನಾಲ್ವರ ಸಾವು, 200 ಮಂದಿಗೆ ಗಾಯ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ: ನಾಲ್ವರ ಸಾವು, 200 ಮಂದಿಗೆ ಗಾಯ

0

ಉತ್ತರಾಖಂಡ: ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸೇರಿದಂತೆ 200 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಗಾಯಾಳುಗಳು ಸೋಬನ್ ಸಿಂಗ್ ಜೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನೈನಿತಾಲ್ ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳ ತಂಡವು ಜಂಟಿಯಾಗಿ ನಜುಲ್ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದರಸಾವನ್ನು ನೆಲಸಮವನ್ನು ಮಾಡಿತ್ತು. ಬನ್‌ ಭೂಲ್‌ ಪುರದಲ್ಲಿ “ಕಾನೂನುಬಾಹಿರವಾಗಿ ನಿರ್ಮಿಸಲಾದ” ಮದರಸಾ ಮತ್ತು ಪಕ್ಕದ ಮಸೀದಿಯನ್ನು ಕೆಡವಿದ ಕಾರಣಕ್ಕೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡು ಅಲ್ಲಿನ ನಿವಾಸಿಗಳು ಅಲ್ಲಿದ್ದ ವಾಹನಗಳು ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಕಲ್ಲುಗಳನ್ನು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ಫ್ಯೂ ಜಾರಿ ಮಾಡಿದ್ದಾರೆ ಅಲ್ಲದೆ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ.

ಮದರಸಾ ಕೆಡವಲು ಮುಂದಾದ ವೇಳೆ ನಡೆದ ಕಲ್ಲುತೂರಾಟದಲ್ಲಿ ಸುಮಾರು ನೂರಕ್ಕೂ ಹೆಚ್ಚು ಪೊಲೀಸ್ ಸಿಬಂದಿಗಳು ಗಾಯಗೊಂಡಿದ್ದಾರೆ. ಅಲ್ಲದೆ ಕಟ್ಟಡ ಕೆಡವಲು ಬಂದಿದ್ದ ಕಾರ್ಮಿಕರೂ ಸೇರಿದ್ದರು ಎನ್ನಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ನ್ಯಾಯಾಲಯದ ಆದೇಶದ ಬಳಿಕವೇ ಮಸೀದಿ ನೆಲಸಮ ಮಾಡಲು ತಂಡವನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರದೇಶದಲ್ಲಿ “ಸಮಾಜ ವಿರೋಧಿಗಳು” ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಗೆ ಕಾರಣವಾಯಿತು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು.

ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.