ಮಂಡ್ಯ:ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.26 ಹಾಗೂ 27 ರಂದು ರಾಜ್ಯ ಮಟ್ಟದ ಯುವ ಬೃಹತ್ ಉದ್ಯೋಗ ಮೇಳವನ್ನು ಅಯೋಜಿಸಲಾಗಿದ್ದು,ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳು ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು, ಉದ್ಯೋಗ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು ರಾಜ್ಯವಲಯದಿಂದ 500 ಕ್ಕೂ ಹೆಚ್ಚಿನ ಪ್ರತಿಷ್ಟಿತ ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ. ಆಸಕ್ತ ಉದ್ಯೋಗಾಕಾಂಕ್ಷಿಗಳು
ಈ ಕೂಡಲೇ http://udyogamela.skillconnect.kaushalkar.com/candidateRegistration ನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ ಎಂದರು.
ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಮಟ್ಟದ ಕಛೇರಿ,ಗ್ರಾಮ ಪಂಚಾಯತಿ ಅವರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಮಾಡಿ ಉದ್ಯೋಗಕಾಂಕ್ಷಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ಗ್ರಾಮಗಳಲ್ಲಿನ ಯುವಕರಿಗೆ ಮಾಹಿತಿ ನೀಡಿ ಉದ್ಯೋಗ ಮೇಳಕ್ಕೆ ಸಜ್ಜುಗೊಳಿಸಿ ಎಂದರು.
ಎಸ್.ಎಸ್.ಎಲ್.ಸಿ, ಪಿಯುಸಿ, ಸೇರಿದಂತೆ ಎಲ್ಲಾ ರೀತಿಯ ಉನ್ನತ ಮಟ್ಟದ ವ್ಯಾಸಂಗ ಮಾಡಿದವರು ಉದ್ಯೋಗ ಮೇಳಕ್ಕೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಅಂತಿಮ ವರ್ಷದ ಪದವಿ ಪಡೆಯುತ್ತಿರುವವರು ಪದವಿ ಪೂರೈಸಿದ ನಂತರ ಕೌಶಲ್ಯ ತರಬೇತಿ ಪಡೆಯಬೇಕೆಂದು ಇಚ್ಚಿಸಿದಲ್ಲಿ ಲಿಂಕ್ ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.
ಇದೇ ಸಂದರ್ಭದಲ್ಲಿ ಉದ್ಯೋಗ ಮೇಳ ಸಂಬಂಧ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸಿಫ್, ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗಾನಂದ, ನಗರಾಭಿವೃದ್ಧಿ ಕೋಶದ ಯೋಜನೆ ನಿರ್ದೇಶಕಿ ತುಷರಮಣಿ, ನಗರಸಭೆ ಆಯುಕ್ತ ಮಂಜುನಾಥ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.