ಮನೆ ರಾಜ್ಯ ಕರ್ನಾಟಕಕ್ಕೆ ಏಮ್ಸ್‌ – ಕೇಂದ್ರ ಸರಕಾರದಿಂದ ದಾರಿತಪ್ಪಿಸುವ ಹೇಳಿಕೆ ಖಂಡನೀಯ: ಸಚಿವ ಎನ್‌ ಎಸ್‌ ಭೋಸರಾಜು

ಕರ್ನಾಟಕಕ್ಕೆ ಏಮ್ಸ್‌ – ಕೇಂದ್ರ ಸರಕಾರದಿಂದ ದಾರಿತಪ್ಪಿಸುವ ಹೇಳಿಕೆ ಖಂಡನೀಯ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ಲೋಕಸಭೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರಶ್ನೆಗೆ ಕೇವಲ ಹುಬ್ಬಳ್ಳಿ – ಧಾರವಾಡ ಪ್ರದೇಶದಲ್ಲಿ ಏಮ್ಸ್‌ ಸ್ಥಾಪನೆಯ ಪ್ರಸ್ತಾಪವನ್ನ ಕರ್ನಾಟಕ ರಾಜ್ಯದಿಂದ ಸ್ವೀಕರಿಸಲಾಗಿದೆ ಎನ್ನುವ ಉತ್ತರ ನೀಡುವ ಮೂಲಕ ಕೇಂದ್ರ ಸರಕಾರ ದಾರಿತಪ್ಪಿಸುತ್ತಿದೆ, ಇದು ಖಂಡನೀಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಈ ರೀತಿಯ ಉತ್ತರಗಳಿಂದ ರಾಜ್ಯದ ಜನರಲ್ಲಿ ಗೊಂದಲು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ಸರಕಾರ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಕೋರಿ ಈಗಾಗಲೇ ಮೂರು ಪತ್ರಗಳನ್ನು ಬರೆದಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದಿನಾಂಕ: 17/06/2023 ರಂದು ಮೊದಲ ಪತ್ರವನ್ನು ಬರೆದು ರಾಯಚೂರಿನಲ್ಲೇ ಏಮ್ಸ್‌ ಸ್ಥಾಪಿಸುವಂತೆ ಕೋರಿಕೆ ಸಲ್ಲಿಸಿದ್ದರು.

ನಂತರ ನನ್ನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸಚಿವರಾದ ಭಗವಂತ್‌ ಖೂಭಾ, ರಾಯಚೂರು ಹಾಗೂ ಕೊಪ್ಪಳ ಸಂಸದರು, ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಏಮ್ಸ್‌ ಹೋರಾಟ ಸಮಿತಿಯ ಸದಸ್ಯರ ನಿಯೋಗ 22/08/2023 ರಂದು ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್‌ ಮಾಂಡವಿಯಾ ಅವರನ್ನು ಭೇಟಿ ಮಾಡಿತ್ತು. ಈ ಭೇಟಿಯಲ್ಲಿ ರಾಜ್ಯ ಸರಕಾರದ ಪ್ರಸ್ತಾವನೆಯನ್ನ ಮುಖ್ಯಮಂತ್ರಿಗಳ ಪತ್ರದ ರೂಪದಲ್ಲಿ ಸಲ್ಲಿಸಲಾಗಿತ್ತು. 

ಮುಖ್ಯಮಂತ್ರಿಗಳ ಮೊದಲನೇ ಪತ್ರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳ ನಿಯೋಗದ ಭೇಟಿಗೂ ಕೇಂದ್ರ ಸರಕಾರದಿಂದ ಯಾವುದೇ ಸಕಾರಾತ್ಮಕ ಉತ್ತರ ದೊರಕದ ಹಿನ್ನಲೆಯಲ್ಲಿ ದಿನಾಂಕ: 07/09/2023 ರಂದು ಮುಖ್ಯಮಂತ್ರಿಗಳು ಎರಡನೇ ಪತ್ರವನ್ನು ಬರೆದರು. ಇದಕ್ಕೂ ಯಾವುದೇ ಉತ್ತರ ದೊರಕದ ಹಿನ್ನಲೆಯಲ್ಲಿ ದಿನಾಂಕ: 29/01/2024 ರಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರಬರೆದು ಕೇಂದ್ರ ಆಯವ್ಯಯದಲ್ಲಿ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ ಮನವಿ ಮಾಡಿದರು.

ಇದರ ಬೆನ್ನಲ್ಲೇ ದಿನಾಂಕ 07/02/2024 ರಂದು ನಾನು ಹಾಗೂ ರಾಯಚೂರು ಉಸ್ತುವಾರಿ ಸಚಿವರಾದ ಶರಣಪ್ರಕಾಶ್‌ ಪಾಟೀಲ್‌ ಕೇಂದ್ರ ಆರೋಗ್ಯ ಸಚಿವರಾದ ಮನ್ಸೂಖ್‌ ಮಾಂಡವಿಯಾ ಅವರನ್ನ ಭೇಟಿಯಾಗಿ ಮೂರು ಪತ್ರಗಳನ್ನು ನೀಡಿ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ ರಾಜ್ಯಸರಕಾರದ ಪ್ರಸ್ತಾವನೆಯನ್ನ ಅವರಿಗೆ ಮನವರಿಕೆ ಮಾಡಿದ್ದೇವು.

ಆದರೆ, ಈ ಎಲ್ಲಾ ಪ್ರಯತ್ನಗಳ ನಡುವೆಯೂ ಕರ್ನಾಟಕ ರಾಜ್ಯ ಸರಕಾರ ಕೇವಲ ಹುಬ್ಬಳ್ಳಿ – ಧಾರವಾಡ ಪ್ರದೇಶದಲ್ಲಿ ಏಮ್ಸ್‌ ಸ್ಥಾಪನೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂಬ ಉತ್ತರವನ್ನು ಬಿಜೆಪಿ ಸರ್ಕಾರ ನೀಡಿರುವುದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿ ಮಾಡುತ್ತಿರುವ ಮಹಾ ಮೋಸ . ಇದು ಖಂಡನೀಯ. ಈ ಮೂಲಕ ಕರ್ನಾಟಕ ರಾಜ್ಯ ಸರಕಾರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳ ಪತ್ರ, ಸಚಿವರ ನಿಯೋಗದ ಮನವಿ ಯಾವ ಮನವಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಇದುವರೆಗೂ ಪರಿಗಣಿಸಿಯೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ರಾಯಚೂರಿನಲ್ಲೇ ಏಮ್ಸ್‌ ಸ್ಥಾಪನೆ ಆಗಬೇಕು ಎನ್ನುವುದು ರಾಜ್ಯ ಸರಕಾರದ ಪ್ರಸ್ತಾವನೆಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳ ಪತ್ರ ಅಧಿಕೃತ ಪ್ರಸ್ತಾವನೆ ಅಲ್ಲವೇ ಎಂದು ಪ್ರಶ್ನಿಸಿದ ಸಚಿವರು, ಈ ಕೂಡಲೇ ಕೇಂದ್ರ ಸರಕಾರ ತನ್ನ ಉತ್ತರವನ್ನು ಹಿಂದಕ್ಕೆ ತಗೆದುಕೊಳ್ಳಬೇಕು. ಹಾಗೆಯೇ, ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವ ನಿಟ್ಟಿನಲ್ಲಿ ತನ್ನ ಬದ್ದತೆಯನ್ನು ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.