ಮನೆ ಕಾನೂನು ಕಾನೂನು ಕೇವಲ ಅಸೂಯೆಪಡುವ ಪ್ರೇಯಸಿಯಲ್ಲ, ಅದು ಜೀವನಪರ್ಯಂತದ ದಾಂಪತ್ಯ: ಹಿರಿಯ ವಕೀಲ ಶ್ರೀರಾಮ್ ಪಂಚು

ಕಾನೂನು ಕೇವಲ ಅಸೂಯೆಪಡುವ ಪ್ರೇಯಸಿಯಲ್ಲ, ಅದು ಜೀವನಪರ್ಯಂತದ ದಾಂಪತ್ಯ: ಹಿರಿಯ ವಕೀಲ ಶ್ರೀರಾಮ್ ಪಂಚು

0

ಕಾನೂನು ಕೇವಲ ಅಸೂಯೆಪಡುವ ಪ್ರೇಯಸಿಯಲ್ಲ, ಆಜೀವ ಪರ್ಯಂತದ ದಾಂಪತ್ಯವಾಗಿದ್ದು ಇದಕ್ಕಾಗಿ ಪ್ರತಿನಿತ್ಯ ಪ್ರೀತಿ, ತ್ಯಾಗ, ವಾತ್ಸಲ್ಯ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಶ್ರೀರಾಮ್‌ ಪಂಚು ತಿಳಿಸಿದರು.

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆದ ವಕೀಲರ ಪರಿಷತ್ತಿನ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೃತ್ತಿಗೆ ಹೊಸದಾಗಿ ಸೇರಿದ ವಕೀಲರಿಗೆ ಸಲಹೆ ನೀಡುತ್ತಾ ನ್ಯಾಯಿಕ ವರ್ಗಕ್ಕೆ ಪ್ರವೇಶ ಪಡೆಯುವುದು ಹೊಸ ಜನ್ಮ ಪಡೆದಂತೆ. ಇದು ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುವ ಉದಾತ್ತ ವೃತ್ತಿಯಾಗಿದೆ ಎಂದರು.

ʼಇತರ ಸಂಗತಿಗಳು ನಿಮ್ಮನ್ನು (ಜೀವನದಲ್ಲಿ) ವಿಫಲಗೊಳಿಸಿದರೂ ಕಾನೂನು ಎಂದಿಗೂ ಸೋಲಿಸುವುದಿಲ್ಲ” ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ದುರುಳರ ವಿರುದ್ಧ ವಕೀಲ ಸಮುದಾಯ ಟೊಂಕ ಕಟ್ಟಿ ನಿಂತ ತುರ್ತು ಪರಿಸ್ಥಿತಿಯ ದಿನಗಳನ್ನು ಸ್ಮರಿಸಿದರು.

ದಬ್ಬಾಳಿಕೆ ಮಾಡುವ ಮತ್ತು ಜನರ ಸ್ವಾತಂತ್ರ್ಯ ಕಸಿದುಕೊಳ್ಳಲು ಬಯಸುವ ಯಾವುದೇ ವ್ಯಕ್ತಿ ಕೇವಲ ಒಂದು ವರ್ಗಕ್ಕೆ ಅಂದರೆ ವಕೀಲರಿಗೆ ಭಯಪಡುತ್ತಾನೆ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುವವರು. ಚಿಂತನೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ ವಕೀಲರು ನಿರಂತರವಾಗಿ ಹೋರಾಟ ನಡೆಸಬೇಕು” ಎಂದು ಅವರು ಹೇಳಿದರು.

“ಕಾನೂನು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ವೃತ್ತಿಯಲ್ಲಿ ನಿಮಗೆ ಸಂಬಂಧಿಕರು ಇದ್ದಾರಾ ಇಲ್ಲವೋ ಅನ್ನುವುದು ಮುಖ್ಯವಲ್ಲ. ವೃತ್ತಿ ಎಂಬುದು ಕಠಿಣ ಪರಿಶ್ರಮಕ್ಕೆ ಅನನ್ಯ ರೀತಿಯಲ್ಲಿ ಪ್ರತಿಫಲ ನೀಡುತ್ತದೆ” ಎಂದು ಅವರು ಹೇಳಿದರು.