ಬೆಂಗಳೂರು(Bengaluru): ಪಿಡಿಒಗಳ ವಿರುದ್ಧ ಸಾರ್ವಜನಿಕರು ನನಗೆ ಸಾಕಷ್ಟು ದೂರುಗಳನ್ನು ಕೊಡುತ್ತಿದ್ದಾರೆ. ಎಲ್ಲಿಗೆ ಭೇಟಿ ಮಾಡಿದರೂ ಮೊದಲ ದೂರು ಪಿಡಿಒಗಳ ವಿರುದ್ಧವೇ ಆಗಿರುತ್ತದೆ. ಆದ್ದರಿಂದ ಮೊದಲು ಇವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಿಇಒಗಳು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯದ ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯಲ್ಲಿ ಸಿಇಓಗಳಿಗೆ ತಾಕೀತು ಮಾಡಿದರು.
ಸರ್ಕಾರದ ಯೋಜನೆಗಳನ್ನು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನ ಮಾಡುವ ಜವಾಬ್ದಾರಿ ಪಿಡಿಒಗಳ ಮೇಲೆ ಇರುತ್ತದೆ. ಇವರೇ ಅಡ್ಡದಾರಿ ಹಿಡಿದರೆ ಸರ್ಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪುತ್ತವೆಯೇ? ಹಾಗಾಗಿ ಅವರನ್ನು ಮೊದಲು ನಿಯಂತ್ರಿಸಬೇಕು. ಇಲ್ಲದಿದ್ದರೆ ನಿಮ್ಮ(ಸಿಇಒ) ಮೇಲೆ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮೊದಲು ನೀವು ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಪರಿಪಾಠವನ್ನು ನಿಲ್ಲಿಸಿ. ಗ್ರಾಮ ಪಂಚಾಯಿತಿ ಕಚೇರಿಗಳಿಗೆ, ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರೂಢಿಸಿಕೊಳ್ಳಬೇಕು. ಸಿಇಒಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರದ ಯಾವುದೇ ಕಾರ್ಯಕ್ರಮಗಳು ನಿಜವಾದ ಫಲಾನುಭವಿಗಳಿಗೆ ತಲುಪುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಮುಂದೆ ಗಂಭೀರವಾಗಿ ಕಾರ್ಯ ನಿರ್ವಹಿಸಬೇಕು. ಅಧಿಕಾರದ ವಿಕೇಂದ್ರೀಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ನಿಮ್ಮ ನಿಯಂತ್ರಣವಿರಬೇಕು. ಪಿಡಿಒಗಳಿಗೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಿ ಹದ್ದುಬಸ್ತಿನಲ್ಲಿಡಬೇಕು ಎಂದು ತಾಕೀತು ಮಾಡಿದರು.