ಮನೆ ರಾಜ್ಯ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಡಾ.ಕೆ.ವಿ. ರಾಜೇಂದ್ರ

ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಡಾ.ಕೆ.ವಿ. ರಾಜೇಂದ್ರ

0

ಮೈಸೂರು: ಸಾಧು–ಸತ್ಪುರುಷರ, ಶರಣರ, ಮಹಾತ್ಮರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು, ದಿನನಿತ್ಯದ  ವ್ಯವಹಾರದಲ್ಲಿ ಮಾರ್ಗದರ್ಶಕವಾಗಬೇಕು. ಅವರು ನಡೆದ ದಾರಿ, ನುಡಿದ ಮಾತು ನಮಗೆ ಮಾದರಿ ಆಗಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ ರವರು ತಿಳಿಸಿದರು.

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಲಾ ಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ರೀತಿಯ ಮಹಾನುಭಾವರ ಜಯಂತಿ ಆಚರಿಸುವುದು ಎಲ್ಲರಿಗೂ ಅಗತ್ಯವಾದುದು. ಇವರು ಸಮಾಜದ ಅಂಕು-ಡೊoಕುಗಳನ್ನು ತಿಳಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಬೋವಿ ಜನಾಂಗದವರು ಅವರ ಕೆಲಸಕ್ಕೆ ಸೀಮಿತವಾಗಿರದೆ ಉತ್ತಮ ವಿದ್ಯಾಭ್ಯಾಸ ಮಾಡಿ ಇಂದು ಉತ್ತಮ ಸ್ಥಾನದಲ್ಲಿ ಇದ್ದು, ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಸವಣ್ಣನವರ ಸಮಕಾಲೀನರಾದ ಇವರು ಸಮಾಜದ ಶಿಕ್ಷಣಕ್ಕೆ, ಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಸಿದ್ಧರಾಮೇಶ್ವರರ ಆಚಾರ ವಿಚಾರಗಳನ್ನು ನಾವು ಜೀವನದಲ್ಲಿ ಪಾಲಿಸಿ, ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಅಸ್ಪೃಶ್ಯತೆ ಅಸಮಾನತೆಯನ್ನು ಹೋಗಲಾಡಿಸಿ ಸಮಸಮಾಜದ ಕಲ್ಪನೆಯ ಸಮಾನತೆ, ಸಹಬಾಳ್ವೆಯ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಸಿದ್ಧರಾಮೇಶ್ವರರ ನೂರಾರು ತತ್ವಗಳನ್ನು ಎಲ್ಲರಿಗೂ ಸಹ ತಿಳಿಸಬೇಕು ಎಂದು ಹೇಳಿದರು.

ಮುಖ್ಯ ಭಾಷಣಕಾರರಾದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕರಾದ ಪ್ರೊ.ಎಸ್. ಶಿವರಾಜಪ್ಪ ಅವರು ಮಾತನಾಡಿ, ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಸಿದ್ಧರಾಮೇಶ್ವರ ವಚನಗಳನ್ನು ನೆನೆಸಿಕೊಳ್ಳಬೇಕು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದಲ್ಲಿ ಅಲ್ಲಮ ಪ್ರಭು, ಬಸವಣ್ಣನವರ ಕಾಲದಲ್ಲಿ ವಚನ ಸಾಹಿತ್ಯದಲ್ಲಿ ಒಂದು ಕ್ರಾಂತಿಯ ಅಲೆಯನ್ನು ಸೃಷ್ಟಿಸದಂತಹವರಲ್ಲಿ ಸಿದ್ಧರಾಮೇಶ್ವರರು ಒಬ್ಬರು. 12 ನೇ ಶತಮಾನದಲ್ಲಿನ 1679 ವಚನಗಳು ಲಭ್ಯವಾಗಿವೆ. ಎಲ್ಲಾ ವಚನಗಳಲ್ಲಿಯೂ ಸಾಮಾಜಿಕ ಕ್ರಾಂತಿಯ ಸಾಮಾಜಿಕ ಸಂವೇದನೆ, ಸಾಮಾಜಿಕ ಕಳಕಳಿ, ಸಂಯಮ, ಆಧ್ಯಾತ್ಮಿಕದ ಒಲವು ಇದೆ, ಇದೇ ಇವರ ಪ್ರೌಢಿಮೆ ಎಂದರು.

ಎಲ್ಲವನ್ನೂ ಪ್ರಶ್ನೆ ಮಾಡಿ, ಹೋರಾಟ ಮಾಡಿ ಬದುಕಬೇಕು. ಈ ಕೆಲಸವನ್ನು ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಅನುಭವಮಂಟಪದಲ್ಲೇ ಬಸವಣ್ಣ ಅಲ್ಲಮ ಪ್ರಭುವನ್ನು ಪ್ರಶ್ನೆ ಮಾಡುವುದರ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಕೆರೆಯನ್ನು ಕಟ್ಟಿಸುವುದು, ಬಾವಿ ತೋಡಿಸುವುದು ಇಂದು ಪ್ರಮುಖ ಯೋಜನೆಯಾಗಿದೆ ಆದರೆ ಇದನ್ನು 12 ನೇ ಶತಮಾನದಲ್ಲಿಯೇ ಬೆಳಕಿಗೆ ತಂದ ಧೀಮಂತರು ಸಿದ್ದರಾಮೇಶ್ವರ. ಸಿದ್ದರಾಮೇಶ್ವರರ ವಚನಗಳು ವೈಚಾರಿಕವಾಗಿದ್ದವು. ಇಂದು ಜಗತ್ತೇ ಇವರ ವಚನದ ಸಾರಾಂಶವನ್ನು ತಿಳಿದು ಕೊಳ್ಳಬೇಕು ಎಂದರು.

ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಬೋವಿ ಸಮಾಜದ ಹಿತರಕ್ಷಣಾ ಅಧ್ಯಕ್ಷರಾದ ನಾಗರಾಜು ಅವರು ಮಾತನಾಡಿ, ಬೋವಿ ಸಮಾಜದಿಂದ ಶಾಲಾ ಕಾಲೇಜು, ಮತ್ತು ವಸತಿನಿಲಯ ಸೌಲಭ್ಯವನ್ನು ಕಲ್ಪಿಸುವ ಆಶಾಭಾವನೆ ಇದೆ, ಅದಕ್ಕೆ ಬೋವಿ ಸಮಾಜದ ಎಲ್ಲಾ ಮುಖಂಡರು ಕಾರ್ಯಕರ್ತರು ಸಹ ಒಗ್ಗಟ್ಟಾಗಿ ಕೈ ಗೂಡಿಸಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಸವಿತಾ, ಮೈಸೂರು ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಸೋಮಶೇಖರ್, ಬೋವಿ ಸಮಾಜದ ಉಪಾಧ್ಯಕ್ಷರಾದ ಪಿ.ಎ.ಚಿನ್ನಸ್ವಾಮಿ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಜಿ.ವಿ ಸೀತಾರಾಮ್, ಅಧ್ಯಕ್ಷರಾದ ಆರ್.ಎಲ್ ಮಾಜಿ ಗೊಂಡಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಹಾಗೂ ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.