ಮನೆ ರಾಜ್ಯ ಲಂಚವಿಲ್ಲದೇ 600 ಕೋಟಿ ರೂ. ಹಣ ಬಿಡುಗಡೆ ಮಾಡಿದ ಲೋಕೋಪಯೋಗಿ ಇಲಾಖೆ: ಕೆಂಪಣ್ಣ

ಲಂಚವಿಲ್ಲದೇ 600 ಕೋಟಿ ರೂ. ಹಣ ಬಿಡುಗಡೆ ಮಾಡಿದ ಲೋಕೋಪಯೋಗಿ ಇಲಾಖೆ: ಕೆಂಪಣ್ಣ

0

ಬೆಂಗಳೂರು: ರಾಜ್ಯದ 1054 ಸಣ್ಣ ಗುತ್ತಿಗೆದಾರರ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಿಲ್​​ ಇರುವ 600 ಕೋಟಿ ರೂ. ಹಣವನ್ನು ಲೋಕೋಪಯೋಗಿ ಇಲಾಖೆ ಯಾವುದೆ ಲಂಚ ಪಡೆಯದೆ ಬಿಡುಗಡೆ ಮಾಡಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೆ ರೀತಿ ಉಳಿದ ಇಲಾಖೆಯಲ್ಲಿಯೂ ಬಿಡುಗಡೆ ಆಗಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ   ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ​ ಕೂಡ ಸಹಕಾರ ನೀಡುತ್ತಿದ್ದಾರೆ. ಬಿಬಿಎಂಪಿಯಲ್ಲಿನ ಬಾಕಿ ಬಿಲ್ ​​ಗಳ ಬಿಡುಗಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನೂ ಒಂದು ವರ್ಷದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೈಕೋರ್ಟ್ ಸಹ ಇವತ್ತು ಬಿಲ್ ಬಿಡುಗಡೆ ಬಗ್ಗೆ ಹೇಳಿದೆ. ಪ್ಯಾಕೇಜ್ ಸಿಸ್ಟಂ ಆರೋಪಕ್ಕೆ ಗುತ್ತಿಗೆದಾರರ ಸಂಘ ಬದ್ಧವಿದೆ. ಪ್ಯಾಕೇಜ್ ಸಿಸ್ಟಂನಿಂದ ಭ್ರಷ್ಟಾಚಾರ ನಡೆಯುತ್ತಿದೆ. ಪ್ಯಾಕೇಜ್ ಸಿಸ್ಟಂ ರದ್ದು ಮಾಡುವ ಒತ್ತಾಯಕ್ಕೆ ನಮ್ಮ ಸಂಘ ಬದ್ಧವಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್​ ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತೆಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು  ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಸಹ ಕಮಿಷನ್ ಆರೋಪ ಮಾಡಿದ್ದರು.  ಯಾವುದೇ ಶಾಸಕರು ಹಾಗೂ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡದೆ, ಬದಲಾಗಿ ಅಧಿಕಾರಗಳ ವಿರುದ್ಧ ಆರೋಪಿಸಿದ್ದರು. ಮೊದಲು (ಬಿಜೆಪಿ ಸರ್ಕಾರದ ಅವಧಿ) ಶಾಸಕರು ನೇರವಾಗಿ ಹಣ ಕೇಳುತ್ತಿದ್ದರು. ಈಗ ಅಧಿಕಾರಿಗಳು ಹಣ ಕೇಳ್ಳುತ್ತಿದ್ದಾರೆ. 40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಮುಂದುವರೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ನಿಮಗೆ ಕೆಲಸ ಬೇಕು ಅಂದರೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ಹಣ ಕೊಡಿ ಅಂತ ಶಾಸಕರು ಸಚಿವರು ಯಾರು ಕೇಳಿಲ್ಲ. ಆದ್ರೆ ಈ ಸರ್ಕಾರದಲ್ಲಿ ಹಣ ಕೊಡುವಂತೆ ಅಧಿಕಾರಿಗಳು ನೇರವಾಗಿ ಕೇಳುತ್ತಿದ್ದಾರೆ. ಸದ್ಯದರಲ್ಲೆ ಅಧಿಕಾರಿಗಳ ಹೆಸರುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.

ಬಿಬಿಎಂಪಿಯಿಂದ ‌300 ಕೋಟಿ ಪ್ಯಾಕೇಜ್ ಟೆಂಡರ್​​ ನ್ನು ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ. ವಿವಿಧ ಇಲಾಖೆಯಲ್ಲಿ ಅನವಶ್ಯಕ ಪ್ಯಾಕೇಜ್ ಟೆಂಡರ್ ನಡೆದಿವೆ. ಕೂಡಲೆ ಪ್ಯಾಕೇಜ್ ಟೆಂಡರ್ ರದ್ದುಗೊಳಿಸಬೇಕು. ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದು, ಟೆಂಡರ್ ರದ್ದುಗೊಳಿಸಲು ಮನವಿ ಮಾಡಿದ್ದೇವೆ. ಅಲ್ಲದೆ ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಇಂಜಿನಿಯರ್​ಗೆ ಕೇಳಿದರೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ. ಅವರನ್ನ ಪ್ರಶ್ನಿಸಿದರೆ ಮೇಲಾಧಿಕಾರಿಗಳ ಕಡೆ ತೋರಿಸ್ತಾರೆ. ಅಧಿಕಾರಿಗಳನ್ನ ಕೇಳಿದರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡುತ್ತಾರೆ ಎಂದು ಪ್ಯಾಕೇಜ್ ಟೆಂಡರ್​​ಗಳ ವಿರುದ್ಧ ಗುಡುಗಿದ್ದರು.