ಮನೆ ರಾಜ್ಯ ಮಂಡ್ಯ ಜೆಡಿಎಸ್ ನಾಯಕರ ಜತೆ ಮಹತ್ವದ ಚರ್ಚೆ: ಮಂಡ್ಯ ಅಭ್ಯರ್ಥಿ ಆಯ್ಕೆ ಅಧಿಕಾರ ಹೆಚ್.ಡಿ.ಕುಮಾರಸ್ವಾಮಿಗೆ ಬಿಟ್ಟ...

ಮಂಡ್ಯ ಜೆಡಿಎಸ್ ನಾಯಕರ ಜತೆ ಮಹತ್ವದ ಚರ್ಚೆ: ಮಂಡ್ಯ ಅಭ್ಯರ್ಥಿ ಆಯ್ಕೆ ಅಧಿಕಾರ ಹೆಚ್.ಡಿ.ಕುಮಾರಸ್ವಾಮಿಗೆ ಬಿಟ್ಟ ಹೆಚ್.ಡಿ.ದೇವೇಗೌಡರು

0

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆ ಹಾಗೂ ಅಲ್ಲಿನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ ಎಂದು ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ತಿಳಿಸಿದರು.

ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಇನ್ನಿತರೆ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಎರಡು ಚುನಾವಣೆಗಳಿಗೆ ಮಂಡ್ಯದಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ನಾನು ಚರ್ಚೆ ಮಾಡಿದ್ದೇನೆ. ಎಲ್ಲಾ ನಾಯಕರ ಅಭಿಪ್ರಾಯ ಆಲಿಸಿದ್ದೇನೆ. ಈ ಬಗ್ಗೆ ಕುಮಾರಸ್ವಾಮಿ ಅವರು ಕೋರ್ ಕಮಿಟಿ ಹಾಗೂ ಪಕ್ಷದ ಎಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡುತ್ತಾರೆ ಎಂದರು ಅವರು.

ಶಿಕ್ಷಕರ ಕ್ಷೇತ್ರದಲ್ಲಿ ಕೆ.ಟಿ.ಶ್ರೀಕಂಠೇಗೌಡರು ಹಾಗೂ ವಿವೇಕ್ ಅವರ ಹೆಸರುಗಳಿವೆ. ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆ. ಇನ್ನೊಬ್ಬರಿಗೆ ಬೇರೆ ಕಡೆ ಅವಕಾಶ ಕಲ್ಪಿಸಲಾಗುವುದು. ಇಬ್ಬರಲ್ಲಿ ಯಾರು ಎನ್ನುವ ನಿರ್ಧಾರವನ್ನು ಕುಮಾರಸ್ವಾಮಿ ಅವರಿಗೇ ಬಿಡುತ್ತೇನೆ. ಅವರು ಏನು ಹೇಳುತ್ತಾರೋ ಅದರಂತೆ ಇಬ್ಬರೂ ನಡೆದುಕೊಳ್ಳಬೇಕು ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಲೋಕಸಭೆಗೆ ಕುಮಾರಸ್ವಾಮಿ ನಿಲ್ಲೋದಿಲ್ಲ:

ಲೋಕಸಭೆಗೆ ಯಾರು ಅಭ್ಯರ್ಥಿ ಆಗಬೇಕು ಎನ್ನುವ ಬಗ್ಗೆ ಎಲ್ಲಾ ನಾಯಕರು ಬಹಳ ಸದ್ಭಾವನೆ ವ್ಯಕ್ತ ಮಾಡಿದ್ದಾರೆ. ನೀವು ನಿಲ್ಲಬೇಕು ಅಥವಾ ಕುಮಾರಸ್ವಾಮಿ ಅವರು ನಿಲ್ಲಬೇಕು ಇಲ್ಲವೇ ನಿಖಿಲ್ ನಿಲ್ಲಬೇಕು ಎಂದು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ನಾನು ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನಿಖಿಲ್ ಅವರು ಕೂಡ ನಾನು ನಿಲ್ಲೋದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಇಲ್ಲಿ ಅವರು ಸದನದ ಒಳಗೆ, ಹೊರಗೆ ಹೋರಾಟ ನಡೆಸಬೇಕಿದೆ. ಹೀಗಾಗಿ ಅವರು ಲೋಕಸಭೆಗೆ ಹೋಗುವೆ ಎಂದು ಹೇಳಲ್ಲ, ಇರುವ ವಾಸ್ತವಾಂಶವನ್ನು ಹೇಳುತ್ತೇನೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟವಾಗಿ ಹೇಳಿದರು.

ಕುಮಾರಸ್ವಾಮಿ ಅವರು ಲೋಕಸಭೆಗೆ ಹೋಗುತ್ತಾರೆ ಎಂದು ವಿನಾಕಾರಣ ಊಹಾಪೋಹ ಸೃಷ್ಟಿ ಮಾಡಲಾಯಿತು. ಆದರೆ, ಅವರು ಎಂದೂ ಲೋಕಸಭೆಗೆ ಹೋಗುವೆ ಎಂದು ಹೇಳಿಲ್ಲ ಎಂದು ಅವರು ಒತ್ತಿ ಹೇಳಿದರು.

ಮೂರು ದಿನ ಮಂಡ್ಯದಲ್ಲಿ ಪ್ರವಾಸ:

ಪಕ್ಷ ಸಂಘನೆ ದೃಷ್ಟಿಯಿಂದ ಮುಂದಿನ ವಾರದಿಂದ ಮಂಡ್ಯ ಜಿಲ್ಲೆಯ ಎಲ್ಲಾ 8 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಆಗ ಎಲ್ಲಾ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆಮೇಲೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ನಾಯಕರೆಲ್ಲ ಸೇರಿ ಒಂದು ಅಭಿಪ್ರಾಯಕ್ಕೆ ಬರುತ್ತೇವೆ. ನಾವು ಎನ್ ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ನಮ್ಮ ನಿರ್ಧಾರವನ್ನು ಪ್ರಧಾನಿಗಳಾದ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸುತ್ತೇವೆ. ಆಮೇಲೆ ಕುಮಾರಸ್ವಾಮಿ ಅವರು ಅವರೆಲ್ಲರ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

ಕ್ಷೇತ್ರ ಹಂಚಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿಗಳು, ಇಲ್ಲಿ ಜೆಡಿಎಸ್ – ಬಿಜೆಪಿ ಎನ್ನುವುದಲ್ಲ. ಎನ್ ಡಿಎ ಅಷ್ಟೇ ಮುಖ್ಯ. ಅಂತಿಮವಾಗಿ ಮೋದಿ ಅವರು, ಅಮಿತ್ ಶಾ, ನಡ್ಡಾ ಮತ್ತು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈಗಾಗಲೇ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಅವರು ಎಲ್ಲಾ ಮಾಹಿತಿ ನೀಡಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು ಮಾಜಿ ಪ್ರಧಾನಿಗಳು.

ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಶಾಸಕರಾದ ಮಂಜುನಾಥ್, ಮಂಜೇಗೌಡ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠಗೌಡರು, ಜಿಲ್ಲಾಧ್ಯಕ್ಷ ರಮೇಶ್, ರಾಮಚಂದ್ರ ಹಾಗೂ ವಿವೇಕ್ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.