ಮನೆ ಕ್ರೀಡೆ ಟಿ–20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿರಲಿದ್ದಾರೆ: ಜಯ್ ಶಾ

ಟಿ–20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿರಲಿದ್ದಾರೆ: ಜಯ್ ಶಾ

0

ರಾಜ್‌ ಕೋಟ್: ಈ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ–20 ವಿಶ್ವಕಪ್ ಪಂದ್ಯಾವಳಿವರೆಗೆ ರಾಹುಲ್ ದ್ರಾವಿಡ್ ಅವರು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ಧಾರೆ.

ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆ ಬಳಿಕ, ರಾಹುಲ್ ದ್ರಾವಿಡ್ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮುಂದುವರಿಸಲಾಗಿತ್ತು. ಆಗ ಅವರಿಗೆ ತಮ್ಮ ಅವಧಿಯ ಬಗ್ಗೆ ತಿಳಿಸಿರಲಿಲ್ಲ.  ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ವರೆಗೆ ಕೋಚ್ ಆಗಿ ಮುಂದುವರಿಸುವ ಬಗ್ಗೆ ರಾಹುಲ್ ದ್ರಾವಿಡ್ ಜೊತೆ ಪ್ರಾಥಮಿಕ ಮಾತುಕತೆ ನಡೆಸಿದ್ದೇವೆ ಎಂದು ಜಯ್ ಶಾ ಹೇಳಿದ್ದಾರೆ.

ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಅವರು ಕೂಡಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿತ್ತು. ಅವರ ಜೊತೆ ಮಾತನಾಡಲು ಸಮಯ ಸಿಕ್ಕಿಲಿಲ್ಲ ಎಂದು ಬುಧವಾರ ರಾತ್ರಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಾರ್ಯಕ್ರಮದ ಬಳಿಕ ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್‌ರಂತಹ ಹಿರಿಯ ವ್ಯಕ್ತಿಯ ಒಪ್ಪಂದದ ಬಗ್ಗೆ ನೀವೇಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರಿ? ಟಿ–20 ವಿಶ್ವಕಪ್‌ವರೆಗೆ ರಾಹುಲ್ ಭಾಯ್ ಕೋಚ್ ಆಗಿ ಇರಲಿದ್ದಾರೆ  ಎಂದು ಶಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಇದೇವೇಳೆ, ರಾಹುಲ್ ಜೊತೆ ಮತ್ತಷ್ಟು ಮಾತುಕತೆ ನಡೆಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಸಮಯ ಸಿಕ್ಕಾಗ ಅವರೊಂದಿಗೆ ನಾನು ಮಾತುಕತೆ ನಡೆಸುತ್ತೇನೆ. ಒಂದರ ಹಿಂದೊಂದರಂತೆ ಸರಣಿಗಳು ಬರುತ್ತಿವೆ. ವಿಶ್ವಕಪ್ ಮುಗಿದ ಕೂಡಲೇ ದಕ್ಷಿಣ ಆಫ್ರಿಕಾ ಸರಣಿ, ಬಳಿಕ, ಅಫ್ಗಾನಿಸ್ತಾನ ವಿರುದ್ಧ ಟಿ–20 ಸರಣಿ, ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ. ಈ ನಡುವೆ ನಮಗೆ ಮಾತುಕತೆಗೆ ಸಮಯವೇ ಸಿಕ್ಕಿಲ್ಲ ಎಂದು ಜಯ್ ಶಾ ಹೇಳಿದ್ದಾರೆ.

ಇದೇವೇಳೆ, ಐಪಿಎಲ್ ಫ್ರಾಂಚೈಸಿಗಳು ಬಿಸಿಸಿಐ ನಿಗದಿಪಡಿಸಿರುವ ವರ್ಕ್‌ಲೋಡ್ ನಿರ್ವಹಣಾ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದಿದ್ದಾರೆ.