ಮನೆ Breaking News ದೊಡ್ಡಕವಲಂದೆ ಗ್ರಾಪಂ ಸಾಮಾನ್ಯ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ: ಹಲವು ಶಂಕೆ

ದೊಡ್ಡಕವಲಂದೆ ಗ್ರಾಪಂ ಸಾಮಾನ್ಯ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ: ಹಲವು ಶಂಕೆ

0

ಮೈಸೂರು: ದೊಡ್ಡಕವಲಂದೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನೀಡದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅನುದಾನ ಮತ್ತು ಆಡಿಟಿಂಗ್ ವರದಿಗಳನ್ನು ಪರಿಗಣಿಸಲಾಗುತ್ತದೆ. ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ ಮತ್ತು ಗ್ರಾಮದ ಕಲ್ಯಾಣಕ್ಕಾಗಿ ಅಗತ್ಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಭೆಯನ್ನು ನಡೆಸಲಾಗುತ್ತದೆ. ಸರ್ಕಾರ ಮತ್ತು ಸಾರ್ವಜನಿಕರ ತೆರಿಗೆ ಹಣವನ್ನು ಉಪಯೋಗಿಸಲಾಗುತ್ತದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಇದರ ಬಗ್ಗೆ ಕ್ರಮ ವಹಿಸಬೇಕು. ಸಾಮಾನ್ಯ ಸಭೆಯಲ್ಲಿ ಮಾಧ್ಯಮದವರಿಗೆ ಮತ್ತು ಸಾರ್ವಜನಿಕರಿಗೆ ಭಾಗವಹಿಸಲು ಕ್ರಮವಹಿಸಬೇಕು. ಲೋಕಸಭೆ, ರಾಜ್ಯಸಭೆ ಸೇರಿದಂತೆ ವಿಧಾನಸಭೆಗಳಲ್ಲಿ ಮಾಧ್ಯಮದವರಿಗೆ ಅವಕಾಶ ನೀಡಿರುವಾಗ, ಗ್ರಾಮ ಸಭೆಗಳಲ್ಲಿ ಯಾಕೆ ನೀಡುವುದಿಲ್ಲ. ಸಭೆಗಳಲ್ಲಿ ಮಾಧ್ಯಮದವರನ್ನು ನಿರ್ಭಂದಿಸಿರುವುದರ ಬಗ್ಗೆ ಸರ್ಕಾರದ ಸುತ್ತೋಲೆ ಮತ್ತು ಆದೇಶಗಳ ಬಗ್ಗೆ ಲಿಖಿತವಾಗಿ ಪ್ರಶಿಸಿದರೂ ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ಉತ್ತರವಿಲ್ಲ. ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸಿಕೊಳ್ಳುತ್ತಿರುವುದು ಸರ್ವಾಧಿಕಾರಿ ಧೋರಣೆಯಾಗಿರುತ್ತದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕೆಲವು ಅಧಿಕಾರಿಗಳು ಸೇರಿಕೊಂಡು ಸಭೆ ನಡೆಸಿದ್ದು, ಮಾಧ್ಯಮದವರಿಗೆ ಕೂಡ ಪ್ರವೇಶವನ್ನು ನಿರಾಕರಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳ ಈ ನಡವಳಿಕೆ ಸಾಕಷ್ಟು ಅನುಮಾನವನ್ನು ಹುಟ್ಟಿ ಹಾಕಿದೆ. ಇಡೀ ದಿನ ನಡೆಸಿದ ಸಭೆಯಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಅವರ ಕಲಸಗಳಿಗೆ ಮಣ್ಣು ಬಿದ್ದಿದೆ. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾಧ್ಯಮದವರಿಗೆ ಪ್ರವೇಶ ನೀಡದೆ ಸಾರ್ವಜನಿಕರಿಗೆ ವೀಕ್ಷಿಸಲು ಸಾಧ್ಯವಾಗದಂತೆ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಗೌಪ್ಯವಾಗಿ ಚರ್ಚಿಸಿ ಸಾರ್ವಜನಿಕರ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲಿ ತಲೀನರಾಗಿದ್ದರೆ ಎಂದು ತಿಳಿದು ಬಂದಿದೆ.

ತಿಂಗಳುಗಳ ಹಿಂದೆ ದೊಡ್ಡ ಕವಲಂದೆ ಗ್ರಾಮ ಪಂಚಾಯಿತಿಯಲ್ಲಿ ಶೌಚಾಲಯ ನಿರ್ಮಿಸದೆ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಪುರುಷೋತ್ತಮ್ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬೆನ್ನಲ್ಲೆ ಸಾರ್ವಜನಿಕರು, ಮಾಧ್ಯಮದವರನ್ನು ಒಳಗೆ ಸೇರಿಸದೇ ಸಭೆ ಮಾಡಿರುವುದು ಯಾವ ಭ್ರಷ್ಟಾಚಾರದ ಹಗರಣವನ್ನು ಮುಚ್ಚಿ ಹಾಕಲು ಎಂಬುದು ಇನ್ನು ಮುಂದಷ್ಟೇ ತಿಳಿಯಬೇಕಿದೆ.