ನ್ಯೂಯಾರ್ಕ್(New York) : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರ್ಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ವೇಳೆ ಬಲಿಯಾಗಿದ್ದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ ಘೋಷಣೆಯಾಗಿದೆ.
ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೂ ಸಿಕ್ಕಿರುವುದು ವಿಶೇಷ.
ಸಿದ್ದಿಕಿ ಅವರು ಕಳೆದ ವರ್ಷ ಅಫ್ಘಾನಿಸ್ತಾನದ ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆ ವರದಿ ಮಾಡುವಾಗ ಹತ್ಯೆಗೀಡಾಗಿದ್ದರು. ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ಅವರು ರಾಯಿಟರ್ಸ್ ತಂಡದ ಭಾಗವಾಗಿ 2018ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದರು. ಅಫ್ಘಾನಿಸ್ತಾನದ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಇತರ ಪ್ರಮುಖ ಘಟನೆಗಳನ್ನು ವ್ಯಾಪಕವಾಗಿ ಕವರ್ ಮಾಡಿದ್ದರು.
ಭಾರತದಲ್ಲಿ ಕೋವಿಡ್-19 ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ ರಾಯಿಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋ ಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. ಈ ತಂಡದಲ್ಲಿ ಡ್ಯಾನಿಶ್ ಸಿದ್ದಿಕಿ ಜತೆಗೆ ಅದ್ನಾನ್ ಅಬಿದಿ, ಸಾನ್ನಾ ಇರ್ಷದ್ ಮಟ್ಟೂ ಮತ್ತು ಅಮಿತ್ ದಾವೆ ಕೂಡ ಇದ್ದಾರೆ.
ಈ ವರ್ಷ ತನಿಖಾ ವರದಿ ವಿಭಾಗದಲ್ಲಿ ‘ಟಂಪಾ ಬೇ ಟೈಮ್ಸ್’ ಪತ್ರಿಕೆಯ ಮೂವರು ಪತ್ರಕರ್ತರಿಗೆ ಪುಲಿಟ್ಜರ್ ಪ್ರಶಸ್ತಿ ಬಂದಿದೆ. ಫ್ಲೋರಿಡಾ ರಾಜ್ಯದ ಬ್ಯಾಟರಿ ಸಂಸ್ಕರಣೆ ಘಟಕದೊಳಗೆ ವಿಷಯುಕ್ತ ವಾತಾವರಣ ಇರುವುದರ ಕುರಿತು ಈ ಮೂವರು ಸರಣಿ ತನಿಖಾ ವರದಿಗಳನ್ನು ಬರೆದು ಪ್ರಕಟಿಸಿದ್ದರು. ಇದರ ಪರಿಣಾಮವಾಗಿ ಘಟಕದಲ್ಲಿ ಅಧಿಕಾರಿಗಳು ಸುರಕ್ಷಿತ ಕ್ರಮಗಳನ್ನ ಕೈಗೊಂಡರು. ಬ್ರೇಕಿಂಗ್ ನ್ಯೂಸ್ ವರದಿಯಲ್ಲಿ ‘ಮಿಯಾಮಿ ಹೆರಾಲ್ಡ್’ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿದೆ.
ಫ್ಲೋರಿಡಾದ ಸೀಸೈಡ್ ಅಪಾರ್ಟ್ಮೆಂಟ್ ಟವರ್‌ಗಳು ಕುಸಿದ ಘಟನೆಯನ್ನು ಇವರು ಬಹಳ ಚೆನ್ನಾಗಿ ಪ್ರಕಟಿಸಿದ್ದರು ಎನ್ನಲಾಗಿದೆ.ವಿವರಣಾತ್ಮಕ ವರದಿಗಾರಿಕೆ, ಸ್ಥಳೀಯ ವರದಿಗಾರಿಕೆ, ರಾಷ್ಟ್ರೀಯ ವರದಿಗಾರಿಕೆ, ಅಂತರರಾಷ್ಟ್ರೀಯ ವರದಿಗಾರಿಕೆ, ವಿಶೇಷ ಬರಹ, ಕಾಮೆಂಟರಿ, ಸಂಪಾದಕೀಯ ಬರಹ, ಧ್ವನಿ ವರದಿಗಾರಿಕೆ ಮೊದಲಾದ ಪತ್ರಿಕೋದ್ಯಮ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಗಳನ್ನು ಕೊಡಲಾಗಿದೆ. ಇದರ ಜತೆಗೆ ಸಾಹಿತ್ಯ, ಸಂಗೀತ ವಿಭಾಗದಲ್ಲೂ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಈ ವರ್ಷ ರಷ್ಯಾ ಆಕ್ರಮಣ ವಿದ್ಯಮಾನದಲ್ಲೂ ಎದೆಗುಂದದೆ ಕೆಲಸ ಮಾಡಿದ ಉಕ್ರೇನ್ ಪತ್ರಕರ್ತರಿಗೆ ವಿಶೇಷ ಗೌರವ ನೀಡಲಾಗಿದೆ. ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನ್ ದೇಶಗಳಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಿಂದ ನಾಗರಿಕರಿಗೆ ಎಷ್ಟು ಸಾವುನೋವು ಆಗಿದೆ ಎಂಬುದನ್ನು ಬೆಳಕಿಗೆ ತಂದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಕೊಡಲಾಗಿದೆ. ಹಾಗೆಯೇ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಕಳೆದ ವರ್ಷ ಕ್ಯಾಪಿಟಲ್ ಹಿಲ್ (ಅಮೆರಿಕ ಸಂಸತ್ತು) ಮೇಲೆ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ ಘಟನೆಯನ್ನು ವರದಿ ಮಾಡಿದ ಪತ್ರಕರ್ತರಿಗೆ ವಿಶೇಷ ಗೌರವ ನೀಡಲಾಗಿದೆ.