ಮನೆ ರಾಜ್ಯ ಶೀಘ್ರವೇ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಚಾಲನೆ: ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಮಿಳುನಾಡು ಖಂಡನೆ

ಶೀಘ್ರವೇ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಚಾಲನೆ: ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಮಿಳುನಾಡು ಖಂಡನೆ

0

ಚೆನ್ನೈ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಪಾದಿಸಿದರು. ಇದಕ್ಕೆ ತಮಿಳುನಾಡಿನ  ವಿವಿಧ ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸ್​ ನ ಐಎನ್ ​ಡಿಐಎ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಖಂಡಿಸಿದೆ.

ಸೂಕ್ತ ಅನುಮತಿ ಪಡೆದು ಶೀಘ್ರವೇ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ರಚಿಸಲಾಗಿರುವ ವಿಶೇಷ ಸಮಿತಿಗಳ ಅಡಿಯಲ್ಲಿ ಎರಡು ಉಪ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಎಂಡಿಎಂಕೆ ನಾಯಕ ಮತ್ತು ಸಂಸದ ವೈಕೊ, ಕರ್ನಾಟಕ ಮುಖ್ಯಮಂತ್ರಿಯವರ ಈ ಘೋಷಣೆಯು ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ. 9000 ಕೋಟಿ ರೂಪಾಯಿ ವೆಚ್ಚದಲ್ಲಿ 67.14 ಟಿಎಂಸಿ ನೀರನ್ನು ನಿಲ್ಲಿಸಲು ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕವು ಹೆಚ್ಚಿನ ನೀರಿನ ಸಾಮರ್ಥ್ಯದೊಂದಿಗೆ ಮೇಕೆದಾಟು ಅಣೆಕಟ್ಟು ಮತ್ತು 400 MW ಜಲವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಯೋಜಿಸುತ್ತಿದೆ. ಇದನ್ನು ಅನುಮತಿಸಿದರೆ ತಮಿಳುನಾಡಿನ ಕಾವೇರಿ ಜಲಾನಯನ ಜಿಲ್ಲೆಗಳು ಮರುಭೂಮಿಯಾಗುತ್ತವೆ ಎಂದು ಹೇಳಿದ್ದಾರೆ.

ಕಳೆದ 48 ವರ್ಷಗಳಲ್ಲಿ ತಮಿಳುನಾಡು 15.87 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಕಳೆದುಕೊಂಡಿದೆ. ಆದರೆ ಕರ್ನಾಟಕದ ನೀರಾವರಿ ಪ್ರದೇಶ 9.96 ಲಕ್ಷ ಹೆಕ್ಟೇರ್‌ ನಿಂದ 38.25 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಯೋಜನೆ ಅನುಷ್ಠಾನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ತಮಿಳುನಾಡಿನಿಂದ ಕಾವೇರಿ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿರುವ ಕರ್ನಾಟಕ ಮತ್ತೆ ಮೇಕೆದಾಟು ಅಣೆಕಟ್ಟು ಕಟ್ಟಲು ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.