ಮನೆ ಅಪರಾಧ ಆಸ್ತಿಗಾಗಿ ಮೊದಲ ಪತ್ನಿಯ ಮಕ್ಕಳೊಂದಿಗೆ ಸೇರಿ ಎರಡನೇ ಪತ್ನಿಯನ್ನು ಕೊಲೆಗೈದ ಪತಿ

ಆಸ್ತಿಗಾಗಿ ಮೊದಲ ಪತ್ನಿಯ ಮಕ್ಕಳೊಂದಿಗೆ ಸೇರಿ ಎರಡನೇ ಪತ್ನಿಯನ್ನು ಕೊಲೆಗೈದ ಪತಿ

0

ಮೈಸೂರು: ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ಮೈಸೂರಿನ ನಾಯ್ಡುನಗರದಲ್ಲಿ ನಡೆದಿದೆ.

ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಅಖಿಲಾ ಭಾನು (46) ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಆರೋಪಿ ಪತಿ ಅಬ್ಬ ಥಾಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಅಬ್ಬ ಥಾಯೂಬ್ ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ. 2013 ರಲ್ಲಿ ಅಖಿಲಾ ಭಾನುರನ್ನು ಎರಡನೇ ವಿವಾಹವಾಗಿದ್ದ. ಆತನಿಗೆ ಮೊದಲ ಹೆಂಡತಿಯಲ್ಲಿ ನಾಲ್ವರು ಮಕ್ಕಳಿದ್ದರು. ಎರಡನೇ ಪತ್ನಿ ಅಖಿಲಾ ಭಾನು ಕ್ಯಾನ್ಸರ್​​ ನಿಂದ ಬಳಲುತ್ತಿದ್ದು, ಗುಣಮುಖರಾಗಿದ್ದರು. ಆಕೆಗೆ ಮಕ್ಕಳಿರಲಿಲ್ಲ. 6 ತಿಂಗಳ ಹಿಂದಷ್ಟೇ ಅಖಿಲಾ ಭಾನು ಅವರ ಅಕ್ಕನ ಮಗ ಸೈಯದ್ ಇರ್ಫಾನ್ ಆಕೆಗಾಗಿ ನಾಯ್ಡುನಗರದಲ್ಲಿ ಒಂದು ಮನೆ ಖರೀದಿಸಿಕೊಟ್ಟಿದ್ದರು. ಅಬ್ಬ ಥಾಯುಬ್ ಹಾಗೂ ಅಖಿಲಾ ಭಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ನೋಂದಣಿಯಾಗಿತ್ತು.

ಅಖಿಲಾ ಭಾನು ಅವರ ಮನೆಯನ್ನು ಇತ್ತೀಚೆಗೆ ಮೊದಲ ಹೆಂಡತಿಯ ಮಕ್ಕಳಿಗೆ ಬರೆದು ಕೊಡಲು ಅಬ್ಬಥಾಯುಬ್ ಪ್ರಯತ್ನಿಸಿದ್ದ. ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಫೆಬ್ರವರಿ 16 ರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬ ಥಾಯೂಬ್ ಕಣ್ಣೀರಿಡುತ್ತಾ, ‘ಅಖಿಲಾಬಾನು ಮೃತಪಟ್ಟಿದ್ದಾಳೆ’ ಎಂದು ತಿಳಿಸಿ ಗೋಳಾಡಿದ್ದ.

ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾಬಾನು ಶವವನ್ನ ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರಚಿದ ಗಾಯಗಳು ಕಂಡು ಬಂದಿದ್ದವು. ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮ ಸಾವು ಸಹಜವಲ್ಲ ಕೊಲೆ ಎಂದು ದೂರು ನೀಡಿದ್ದರು.

ಇರ್ಫಾನ್ ದೂರಿನ ಹಿನ್ನೆಲೆಯಲ್ಲಿ ತನಿಖೆ‌ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಸದ್ಯ ಮೈಸೂರಿನ ಎನ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.