ಮನೆ ಸ್ಥಳೀಯ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಡಾ. ಕೆ ವಿ ರಾಜೇಂದ್ರ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದು, ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಬರ ಘೋಷಿತ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಇಟ್ಟುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಆಗುವಂತಹ ಸಮಸ್ಯಾತ್ಮಕ ಏರಿಯಗಳು ಹಾಗೂ ಗ್ರಾಮಗಳನ್ನು ಗುರುತಿಸಿಕೊಳ್ಳಿ.  ಪ್ರತಿ ಗ್ರಾಮಕ್ಕೆ ಕಡ್ಡಾಯವಾಗಿ ಒಂದೊಂದು  ಖಾಸಗಿ ಬೋರ್ವೆಲ್ ಹೈಯರ್ ಮಾಡಿಕೊಂಡು ಅವರೊಂದಿಗೆ ಆಗ್ರಿಮೆಟ್ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂದೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುತ್ತದೆ ಆದ್ದರಿಂದ ಟ್ಯಾಂಕರ್ ಮೂಲಕ ನೀರು ನೀಡಲು ಅಗತ್ಯ ಇರುವ ಕಡೆಗೆ ಈಗಲೇ ಟೆಂಡರ್ ಕರೆದು ವ್ಯವಸ್ಥೆ ಮಾಡಿ ಇಟ್ಟುಕೊಳ್ಳಬೇಕು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಿಳಿಸಲು ಹೆಲ್ಪ್ ಲೈನ್ ತೆರೆದು ಸಿಬ್ಬಂದಿ ಗಳನ್ನು ನೇಮಕ ಮಾಡಬೇಕು. ಕುಡಿಯುವ ನೀರಿನ ಪೂರೈಕೆ ಮಾಡುವ ನೀರನ್ನು ಅದರ ಶುದ್ಧತೆ ಹಾಗೂ ಗುಣಮಟ್ಟ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.

ಹೊಸ ಬೋರ್ವೆಲ್ ಗಳನ್ನು ಕೊರೆಯಲು ಅಗತ್ಯ ಇರುವ ಕಡೆ ಗುರುತಿಸಿ ಇಟ್ಟುಕೊಳ್ಳಬೇಕು. ಬರವನ್ನು ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದರು. ಬರ ಪರಿಹಾರದ ಹಣ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು.

ಜಾನುವಾರುಗಳ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಮೇವು ಲಭ್ಯತೆ ಬಗ್ಗೆ ಮಾಹಿತಿ ಇರಬೇಕು. ಮೇವಿನ ಬೀಜದ ಕಿರು ಪೊಟ್ಟಣ ಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಇದು ಸದ್ಬಳಕೆ ಆಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಒಂದು ವಾರದೊಳಗೆ ತಾಲ್ಲೂಕುಗಳಲ್ಲಿ ರೈತ ಮುಖಂಡರೊಂದಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆ, ರಸಗೊಬ್ಬರ ಕೊರತೆ, ವಿದ್ಯುತ್ ಚಕ್ತಿ ಕುರಿತಂತೆ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ರೈತರಿಗೆ ಫ್ರೂಟ್ ಐಡಿ ಸೃಜನೆ ಮಾಡಬೇಕು. ಶೇಕಡಾ 100 ರಷ್ಟು ಫ್ರೂಟ್ ಐಡಿ ಗಳು ಸೃಜಿಸ ಬೇಕು. ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡಲು ಫ್ರೂಟ್ ಐಡಿ ಅವಶ್ಯಕವಾಗಿದೆ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗಳಾದ ಪಿ. ಶಿವರಾಜ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಷರಿಪ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.