ಬೆಂಗಳೂರು: ನಾವು ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 77 ಸಾವಿರ ಕೋಟಿ ಹೂಡಿಕೆ ಬಂದಿರುವುದೇ ರಾಜ್ಯದ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದರು.
ಸರ್ಕಾರದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳಿಗೆ ರಾಜ್ಯಪಾಲರು ಕನ್ನಡಿ ಹಿಡಿದಿದ್ದಾರೆ. ಆದರೆ ಪ್ರತಿ ಪಕ್ಷ ನಾಯಕರಾದ ಆರ್.ಅಶೋಕ್ ಅವರು ರಾಜ್ಯಪಾಲರು ಮಾತಾಡಿದ್ದನ್ನು ಬಿಟ್ಟು ಅವರು ಮಾತಾಡದ್ದನ್ನೆಲ್ಲಾ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಸುಳ್ಳೇ ಆರೋಪ ಮಾಡಿದ್ದಾರೆ.
ನಾವು ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ರಾಜ್ಯಕ್ಕೆ 77 ಸಾವಿರ ಕೋಟಿ ಬಂಡವಾಳ ಹರಿದು ಬಂದಿದೆ. ಬಂಡವಾಳ ಹೂಡಿಕೆಗೂ , ಕಾನೂನು ಸುವ್ಯವಸ್ಥೆಗೂ ನೇರಾ ನೇರ ಸಂಬಂಧ ಇರುತ್ತದೆ. ಸರ್ಕಾರದ ಕಡಿಮೆ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಹೂಡಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದು ವಿವರಿಸಿದರು.
ಉಳಿದಂತೆ ಆರ್.ಅಶೋಕ್ ಅವರ ಆರೋಪ ಮತ್ತು ಸುಳ್ಳುಗಳಿಗೆ ಗೃಹ ಸಚಿವ ಪರಮೇಶ್ವರ್ ಅವರು ಈಗಾಗಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಉಳಿದದ್ದಕ್ಕೂ ಉತ್ತರ ನೀಡುತ್ತಾರೆ ಎಂದರು.
ಬಿಜೆಪಿ ಎಂದರೆ ಸುಳ್ಳು. ಸುಳ್ಳಿನ ಉತ್ಪಾದನೆಯಲ್ಲಿ ಬಿಜೆಪಿ ನಿಸ್ಸೀಮರು. ಅಭಿವೃದ್ಧಿ ಮರೆತು ಸುಳ್ಳುಗಳ ಆಸರೆ ಹೋಗಿದ್ದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದು ರಾಜ್ಯದ ಜನತೆ ಕೊಟ್ಟಿರುವ ಸರ್ಟಿಫಿಕೇಟ್ ಎಂದರು.
BJP ರಾಜ್ಯದಲ್ಲಿ ಇವತ್ತಿನವರೆಗೂ ಸ್ವಂತ ಬಲದಿಂದ ಅಧಿಕಾರಿಕ್ಕೆ ಬಂದೇ ಇಲ್ಲ: ಹಿಂಬಾಗಿಲಲ್ಲಿ ಬಂದಿದ್ದಾರೆ ಅಷ್ಟೆ. ಬಿಜೆಪಿಯಿಂದ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ ಮುಖ್ಯಮಂತ್ರಿ ಆದರು. ಇವರ್ಯಾರೂ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿ ಆದವರಲ್ಲ. ಆಪರೇಷನ್ ಕಮಲ ಮತ್ತು ಹಿಂಬಾಗಿಲ ಮೂಲಕ ಆಮಿಷವೊಡ್ಡಿ ನಮ್ಮ ಶಾಸಕರನ್ನು ಸೆಳೆದು ಅಧಿಕಾರಕ್ಕೇರಿದರು ಎಂದು ಟೀಕಿಸಿ, ಇವತ್ತಿನವರೆಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದ ಉದಾಹರಣೆ ಇದೆಯೇ , ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ನಾವು 2013 ರಲ್ಲಿ 2023 ರಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ. ಜನ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದಾಗಲೂ ತಲೆಬಾಗಿ ಜನರ ತೀರ್ಮಾನವನ್ನು ಒಪ್ಪಿಕೊಂಡು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ನಾವು ಸುಳ್ಳುಗಳ ಆಸರೆಗೆ ಹೋಗಲಿಲ್ಲ ಎಂದರು.
ಪತ್ರಿಕೆಗಳ ಶ್ಲಾಘನೆಗಳನ್ನು ಪ್ರಸ್ತಾಪಿಸಿದ ಸಿಎಂ
ರಾಜ್ಯಪಾಲರ ಭಾಷಣ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲ ಕುರಿತಂತೆ ರಾಜ್ಯ ಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳು ಶ್ಲಾಘಿಸಿ ಬರೆದಿರುವುದನ್ನು ಮತ್ತು ಮೆಚ್ಚುಗೆ ಸೂಚಿಸಿರುವುದನ್ನು ಪ್ರಸ್ತಾಪಿಸಿದರು. ಬಳಿಕ ವಿರೋಧ ಪಕ್ಷಗಳು ನಾಡಿನ ಪತ್ರಿಕೆಗಳ ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನಾದರೂ ಓದುವುದನ್ನು ರೂಢಿಸಿಕೊಳ್ಳಬೇಕು, ಏನನ್ನೂ ತಿಳಿದುಕೊಳ್ಳದೆ ಸುಳ್ಳುಗಳನ್ನು ಹೇಳಬಾರದು ಎಂದರು.