ಕನಕಪುರ: ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್ ಪಕ್ಷ ಮತ್ತು ಅದರ ನಾಯಕ ಹೆಚ್ ಡಿ ಕುಮಾರಸ್ವಾಮಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ವಕೀಲರ ಪ್ರತಿಭಟನೆ, ದಲಿತರ ಪ್ರತಿಭಟನೆ ಹಾಗೂ ಇತರ ಸಂಘರ್ಷಗಳ ಬಗ್ಗೆ ಕನಕಪುರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಅಲ್ಲಿ (ರಾಮನಗರದಲ್ಲಿ) ನಡೆಯುತ್ತಿರುವ ಎಲ್ಲ ಗಲಾಟೆಗಳಿಗೆ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಹೇಳುವ ಮೂಲಕ ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.
ರಾಮನಗರ ಪಿಎಸ್ ಐ ಸಸ್ಪೆಂಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾನೂ ಕೂಡ ಹೇಳಿದ್ದೆ. ಶಾಸಕರೂ ಕಾನೂನು ಪ್ರಕಾರ ಕೈಗೊಳ್ಳಿ ಎಂದಿದ್ದರು. ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ರೆ ಕ್ರಮ ತಗೊಳ್ಳಿ ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಈ ವಿಚಾರದಲ್ಲಿ ಬಿಜೆಪಿ – ಜೆಡಿಎಸ್ನವರು ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ. ಕೋಮು ವಿಚಾರಗಳನ್ನು ತೆಗೆದುಕೊಂಡು ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ, ಅಧಿಕಾರಿ ಅಲ್ಪಸಂಖ್ಯಾತ ಸಮುದಾಯದವರು ಆಗಿರುವುದರಿಂದ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲೇ ಹೇಳಿದ್ದರಲ್ಲವೇ, ಮೈನಾರಿಟಿ ಅಧಿಕಾರಿ ಬೇಡ ಎಂಬುದಾಗಿ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ತಯಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಕಳೆದ ಚುನಾವಣೆ ಮುಗಿದ ಮರುದಿನದಿಂದಲೇ ಕೆಲಸ ಆರಂಭಿಸಿದ್ದೇವೆ. ನಮ್ಮನ್ನು ಕಟ್ಟಿ ಹಾಕುತ್ತೇವೆ ಎನ್ನುತ್ತಿದ್ದಾರಲ್ಲ, ಕಟ್ಟಿಹಾಕಲಿ ನೋಡೋಣ ಎಂದು ಸವಾಲು ಹಾಕಿದರು.