ಮನೆ ಸುದ್ದಿ ಜಾಲ ನೌಕಾನೆಲೆಯಲ್ಲಿ ಆಶಯ ಪಡೆದ ಮಹಿಂದಾ ರಾಜಪಕ್ಸ: ಭಾರಿ ಪ್ರತಿಭಟನೆ

ನೌಕಾನೆಲೆಯಲ್ಲಿ ಆಶಯ ಪಡೆದ ಮಹಿಂದಾ ರಾಜಪಕ್ಸ: ಭಾರಿ ಪ್ರತಿಭಟನೆ

0

ಕೊಲಂಬೊ (Colombo)- ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ (Mahinda Rajapaksa) ಹಾಗೂ ಕುಟುಂಬದ ಕೆಲ ಸದಸ್ಯರು ಟ್ರಿಂಕಾಮಲೈನಲ್ಲಿರುವ ನೌಕಾನೆಲೆಯಲ್ಲಿ ಆಶ್ರಯ ಪಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ,  ನೌಕಾನೆಲೆಯ ಮುಂದೆ ಭಾರಿ ಪ್ರತಿಭಟನೆ ನಡೆದಿದೆ.

ರಾಜಪಕ್ಸ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಅಧಿಕೃತ ನಿವಾಸಕ್ಕೆ ಪ್ರತಿಭಟನಕಾರರ ಗುಂಪು ಬೆಂಕಿ ಹಚ್ಚಿತ್ತು. ಅಧಿಕೃತ ನಿವಾಸ ‘ಟೆಂಪ್‌ ಟ್ರೀಸ್‌’ಗೆ ನುಗ್ಗಲು ಸೋಮವಾರ ಪ್ರತಿಭಟನಕಾರರು ಯತ್ನಿಸುತ್ತಿದ್ದಲೇ ಇದ್ದರು. ಅವರನ್ನು ಚದುರಿಸಲು ಪೊಲೀಸರು ರಾತ್ರಿಯಿಡಿ ಆಶ್ರುವಾಯು ಬಳಸುತ್ತಿದ್ದುದು ವರದಿಯಾಗಿದೆ. ಈ ಪ್ರತಿಭಟನೆ ನಡುವೆಯೇ ರಾಜಪಕ್ಸ ಅವರು ಮಂಗಳವಾರ ನಸುಕಿನಲ್ಲಿ ತಮ್ಮ ನಿವಾಸ ತೊರೆದು, ಟ್ರಿಂಕಾಮಲೈನಲ್ಲಿ ಆಶ್ರಯ ಪಡೆದಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ನಲುಗಿರುವ ದ್ವೀಪರಾಷ್ಟ್ರದಲ್ಲಿ ಪ್ರತಿಭಟನೆ ತೀವ್ರಸ್ವರೂಪ ಪಡೆಯತ್ತಿದೆ. ರಾಜಪಕ್ಸ ಬೆಂಬಲಿಗರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ರಾಜಪಕ್ಸ ಬೆಂಬಲಿಗರು ಹಾಗೂ ಪ್ರತಿಭಟನಕಾರರ ನಡುವಿನ ಸಂಘರ್ಷದಿಂದಾಗಿ ಮೃತಪಟ್ಟವರ ಸಂಖ್ಯೆ ಮಂಗಳವಾರ 8ಕ್ಕೆ ಏರಿದೆ.

ಎಎಫ್‌ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ರಾಜಪಕ್ಸ ಅವರ ಮಗ ನಮಲ್, ತಮ್ಮ ತಂದೆ ಹಾಗೂ ಕುಟುಂಬದ ಯಾವ ಸದಸ್ಯರೂ ದೇಶ ತೊರೆಯುವುದಿಲ್ಲ ಎಂದು ‌ಸ್ಪಷ್ಟಪಡಿಸಿದ್ದಾರೆ.

ವಾರಂಟ್ ಇಲ್ಲದೇ ಜನರನ್ನು ಬಂಧಿಸುವುದು ಸೇರಿದಂತೆ ತುರ್ತು ಕ್ರಮ ಕೈಗೊಳ್ಳುವ ಸಂಬಂಧ, ಸೇನೆ ಹಾಗೂ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ದೇಶದಾದ್ಯಂತ ಕರ್ಫ್ಯೂ ಹೇರಲಾಗಿದೆ.

ಅಧಿವೇಶನ ಕರೆಯಿರಿ

ನಿಲ್ಲದ ಪ್ರತಿಭಟನೆಗಳು, ವ್ಯಾಪಕ ಹಿಂಸಾಚಾರ ಸೇರಿದಂತೆ ದೇಶದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಕೂಡಲೇ ಸಂಸತ್‌ ಅಧಿವೇಶನ ಕರೆಯುವಂತೆ ಸ್ಪೀಕರ್‌ ಮಹಿಂದಾ ಯಪಾ ಅಬೇವರ್ದೆನೆ ಅವರು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಮನವಿ ಮಾಡಿದ್ದಾರೆ.

ಮೇ 17ರಂದು ಅಧಿವೇಶನ ನಿಗದಿಯಾಗಿದೆ. ಆದರೆ, ಈಗ ಪ್ರಧಾನಿ ಇಲ್ಲ ಹಾಗೂ ಸರ್ಕಾರವೂ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ, ಅಧ್ಯಕ್ಷ ಗೊಟಬಯ ಅವರು ಅಧಿವೇಶನವನ್ನು ಮತ್ತೊಮ್ಮೆ ಕರೆಯಬೇಕಾಗುತ್ತದೆ ಎಂದು ಸಂಸತ್‌ನ ಅಧಿಕಾರಿಗಳು ಹೇಳಿದ್ದಾರೆ.