ಮನೆ ರಾಜ್ಯ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು: ದಿನೇಶ್ ಗುಂಡೂರಾವ್

ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು: ದಿನೇಶ್ ಗುಂಡೂರಾವ್

0

ಬೆಂಗಳೂರು: ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು. ದರ ಪಟ್ಟಿ ಪ್ರಕಟಿಸದ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಸುಲಿಗೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಅನೇಕ ದೂರುಗಳು ಸಲ್ಲಿಕೆಯಾದ ಬೆನ್ನಲ್ಲೇ ಆರೋಗ್ಯ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಜ್ವರ, ಕೆಮ್ಮು, ನೆಗಡಿ ಎಂದು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಿದರೂ ಸಾವಿರಾರು ರೂಪಾಯಿ ಬಿಲ್ ವಸೂಲಿ ಮಾಡಲಾಗುತ್ತಿದೆ ಎಂದು ದೂರಿರುವ ಸಾರ್ವಜನಿಕರು ಆರೋಗ್ಯ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ದೂರು ನೀಡಿದ್ದರು. ನೂರಾರು ದೂರುಗಳು ಸಚಿವರಿಗೆ ಬಂದಿದ್ದವು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಖಾಸಗಿ ಆಸ್ಪತ್ರೆಗಳ ಸುಲಿಗೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ, ಕೆಪಿಎಂಇ ಮುಖಾಂತರ ಅಂಗೀಕೃತವಾದ ಆಸ್ಪತ್ರೆಗಳು ಆವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಚಿಕಿತ್ಸಾ ದರ ಪಟ್ಟಿಯನ್ನು ಅಳವಡಿಸಬೇಕು. ಯಾವ್ಯಾವ ಚಿಕಿತ್ಸೆಗಳಿಗೆ ಎಷ್ಟು ದರ ಎಂಬ ಪಟ್ಟಿಯನ್ನು ಅಳವಡಿಸಬೇಕು ಎಂದು ಸೂಚಿಸಿದೆ.

ಆದೇಶ ಪಾಲನೆ ಮಾಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಸೀಜ್ ಮಾಡುವ ಬಗ್ಗೆಯೂ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಯಾವ ಚಿಕಿತ್ಸೆಗೆ ಎಷ್ಟು ದರ ಎಂಬುದು ನಿಗದಿಯಾಗಿದೆ. ಅದರ ಬಗ್ಗೆ ಆಸ್ಪತ್ರೆಯ ಅವರಣದಲ್ಲಿ ಸಾರ್ವಜನಿಕರಿಗೆ ತೊರುವ ರೀತಿಯಲ್ಲಿ ಬೋರ್ಡ್ ಹಾಕಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದೀಗ ಆಸ್ಪತ್ರೆಗಳ ಹೊರಗೆ ಬೋರ್ಡ್​ ಹಾಕುವ ಆದೇಶ ಅನುಷ್ಠಾನ ವಿಚಾರವಾಗಿ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಖಡಕ್ ಸೂಚನೆ ನೀಡಿದೆ. ಪರಿಶೀಲನೆ ನಡೆಸಿ ವರದಿ ನೀಡುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.