ಮನೆ ರಾಜ್ಯ ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯಗಳು, ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿದ ವಿಧಾನಸಭೆಯ ಪ್ರತಿಪಕ್ಷ...

ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯಗಳು, ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ

0

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯಗಳನ್ನು ಕೈಗೊಂಡ ರಾಜ್ಯ ಸರ್ಕಾರದ ನಡೆಯನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ತೀವ್ರವಾಗಿ ಖಂಡಿಸಿದ್ದಾರೆ.

ಬಜೆಟ್ ಮಂಡನೆಯ ಸಾಂವಿಧಾನಿಕ ಕರ್ತವ್ಯವನ್ನು ರಾಜಕೀಯ ಭಾಷಣವಾಗಿ ದುರ್ಬಳಕೆ ಮಾಡಿಕೊಂಡು ಸದನದ ಹಾಗೂ ಆಯವ್ಯಯದ ಪಾವಿತ್ರ್ಯತೆಯನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡಿದೆ. ಈಗ ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯ ಮಂಡಿಸುವ ಮೂಲಕ ಮತೊಮ್ಮೆ ಸದನದ ಪಾವಿತ್ರ್ಯತೆಗೆ ಅಪಚಾರ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದನ್ನು ಸತ್ಯ ಮಾಡಬಹುದು, ತಮ್ಮ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಬಹುದು ಎಂಬ ಭ್ರಮೆಯಲ್ಲಿರುವ ಸಿಎಂ ಸಿದ್ದರಾಮಯ್ಯನವರು ಪದೇ ಪದೇ ಕೇಂದ್ರದ ಮೇಲೆ ಆರೋಪ ಹೊರಿಸುವ ಮೂಲಕ ಒಂದು ಕಪೋಲಕಲ್ಪಿತ, ಬೋಗಸ್ ರಾಜಕೀಯ ಕಥೆ ಸೃಷ್ಟಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಹುನ್ನಾರವನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ರಾಜಕೀಯ ಪ್ರೇರಿತ ನಿರ್ಣಯವನ್ನು ವಿರೋಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ನಡೆಯುವ ಕುರಿತು ಸಭೆ ನಡೆಯುವಾಗ ಮಸೂದೆ, ಚರ್ಚೆಗಳ ಬಗ್ಗೆ ಹೇಳಲಾಗುತ್ತದೆ. ಆದರೆ ಏಕಾಏಕಿ ಕಳ್ಳರಂತೆ ಕೇಂದ್ರ ಸರ್ಕಾರವನ್ನು ಅವಹೇಳನ ಮಾಡುವ, ತೆಗಳುವ ಕೆಲಸ ಮಾಡಲಾಗಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪನವರು ಬಜೆಟ್ ನಲ್ಲಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ವಿಷ ಕಾರಿದೆ. ಒಂದೇ ಬಾರಿಗೆ ನಿರ್ಣಯ ತರುವುದು ಉತ್ತಮ ಸಂಪ್ರದಾಯವಲ್ಲ. ಸ್ಪೀಕರ್ ಕೂಡ ಇದನ್ನು ನಮ್ಮ ಗಮನಕ್ಕೆ ತಂದಿಲ್ಲ. ನಾವು ಬಡ ಜನರಿಗಾಗಿ ಚರ್ಚೆ ನಡೆಯಲಿ ಎಂದು ಸದನ ನಡೆಯಲು ಸಹಕಾರ ನೀಡಿದ್ದೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಹುಚ್ಚರಂತೆ ಕೇಂದ್ರ ಸರ್ಕಾರವನ್ನು ತೆಗಳಿದ್ದಾರೆ. ಈ ರೀತಿ ಮೋಸ ಮಾಡಿ ನಿರ್ಣಯ ತರಬಾರದಿತ್ತು, ರಾಜಾರೋಷವಾಗಿಯೇ ತರಬೇಕಿತ್ತು. ಇದನ್ನು ನಾವೆಲ್ಲರೂ ಖಂಡಿಸಿ ಪ್ರತಿಭಟಿಸಿದ್ದೇವೆ ಎಂದರು.