ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ 140ಕ್ಕೂ ಹೆಚ್ಚು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ಪ್ರಕಟಿಸಿದೆ.
ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜುಲೈ 11ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದುಪಡಿಸಬೇಕು ಮತ್ತು ಭೂ ಸ್ವಾಧೀನ ಅಧಿಸೂಚನೆ ಎತ್ತಿಹಿಡಿಯಬೇಕು ಎಂಬ ಬಿಡಿಎ ಕೋರಿಕೆಯನ್ನೂ ವಿಭಾಗೀಯ ಪೀಠ ಮಾನ್ಯ ಮಾಡಿದೆ.
ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿರುವುದು ಹಾಗೂ ಕಟ್ಟಡ ನಿರ್ಮಾಣವಾಗಿರುವುದೂ ಸೇರಿದಂತೆ ಇತರೆ ಕಾರಣಗಳಿಂದ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾರದಾದರೂ ಮನವಿ ಇದ್ದರೆ, ಅಂತಹ ಭೂ ಮಾಲೀಕರು ಮೂರು ತಿಂಗಳಲ್ಲಿ ಬಿಡಿಎಗೆ ಮನವಿ ಸಲ್ಲಿಸಬೇಕು. ಬಿಡಿಎ ಆ ಮನವಿಗಳನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಪೀಠ ಆದೇಶಿಸಿದೆ.
ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಇರುವುದೂ ಸೇರಿದಂತೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಗಳ ಪಾಲನೆ ಮಾಡಿಲ್ಲ. ಭೂ ಸ್ವಾಧೀನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಹೀಗಾಗಿ, ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ನಡೆಸಿರುವ ಭೂ ಸ್ವಾಧೀನ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ ಎಂದು ಇದೇ ಹೈಕೋರ್ಟ್‌ನ ಏಕಸದಸ್ಯ ಪೀಠ ತೀರ್ಮಾನಿಸಿತ್ತು. ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜುಲೈ 11ರಂದು ಆದೇಶಿಸಿತ್ತು. ಇದೀಗ ಈ ತೀರ್ಪನ್ನು ರದ್ದುಪಡಿಸಿರುವ ವಿಭಾಗೀಯ ಪೀಠವು ಭೂ ಸ್ವಾಧೀನ ಅಧಿಸೂಚನೆಯನ್ನು ಪುರಸ್ಕರಿಸಿದೆ.
ಭೂ ಸ್ವಾಧೀನ ಪ್ರಕ್ರಿಯೆ ಕೈಗೆತ್ತಿಗೊಳ್ಳಲು ರಾಜ್ಯ ಸರ್ಕಾರದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನುಮತಿ ಪಡೆದಿಲ್ಲ. ಮೊದಲಿಗೆ 4,814 ಎಕರೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯಲ್ಲಿ ಬಿಡಿಎ ಉದ್ದೇಶಿಸಿತ್ತು. ನಂತರ ವಿವಿಧ ಕಾರಣಗಳನ್ನು ನೀಡಿ ಸುಮಾರು 800 ಎಕರೆ ಜಮೀನನ್ನು ಅಂತಿಮ ಭೂ ಸ್ವಾಧೀನ ಅಧಿಸೂಚನೆಯನ್ನು ಕೈ ಬಿಡಲಾಗಿದೆ. ಆ ಮೂಲಕ ಭೂ ಸ್ವಾಧೀನದಲ್ಲಿ ತಾರತಮ್ಯ ಎಸಲಾಗಿದೆ ಎಂದು ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುವ ಸಂದರ್ಭದಲ್ಲಿ ಏಕ ಸದಸ್ಯ ಪೀಠ ಹೇಳಿತ್ತು. ಆದರೆ, ಭೂ ಸ್ವಾಧೀನಕ್ಕೆ ಸರ್ಕಾರದಿಂದ ಬಿಡಿಎ ಅನುಮತಿ ಪಡೆದಿದ್ದು, ಅದು ಕಾನೂನುಬದ್ಧವಾಗಿದೆ. ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಕಾರಣಕ್ಕೆ ಇಡೀ ಭೂ ಸ್ವಾಧೀನ ಪ್ರಕ್ರಿಯೆಯೇ ಕಾನೂನು ಬಾಹಿರ ಎಂದು ಅಧಿಸೂಚನೆ ರದ್ದುಪಡಿಸಲಾಗದು. ತಾರತಮ್ಯ ಇದ್ದರೆ, ಆ ಕುರಿತು ಭೂಮಾಲೀಕರು ಮನವಿ ಪತ್ರ ಸಲ್ಲಿಸಿ ತಮ್ಮ ಕುಂದುಕೊರತೆ ಬಗೆಹರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ವಿಭಾಗೀಯ ಪೀಠ ತಿಳಿಸಿದೆ.
ಪ್ರಕರಣದ ವಿವರ: ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ನಗರದ 12 ಗ್ರಾಮಗಳಲ್ಲಿ 4,814 ಎಕರೆ 15 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ 2008ರ ಮೇ 21ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ 4,043 ಎಕರೆ 27 ಗುಂಟೆ ಸ್ವಾಧೀನಕ್ಕೆ ತೀರ್ಮಾನಿಸಿ 2020ರ ಫೆಬ್ರವರಿ 18ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಯಶವಂತಪುರ ಹೋಬಳಿಯ ಶೀಗೇಹಳ್ಳಿ, ಕನ್ನೇನಹಳ್ಳಿ, ಕೊಡಿಗೇಹಳ್ಳಿ, ಮೇಘನಹಳ್ಳಿ, ಕೆಂಗೇರಿ ಹೋಬಳಿಯ ಕೊಮ್ಮಘಟ್ಟ, ಭೀಮನಕೆರೆ, ಭೀಮನಕುಪ್ಪೆ/ ರಾಮಸಾಗರ, ಸೂಳಿಕೆರೆ, ಕೆಂಚೆನಹಳ್ಳಿ, ರಾಮಸಂದ್ರ, ಕೊಮ್ಮಘಟ್ಟ/ಕೃಷ್ಣಸಾಗರ ಮತ್ತು ಚಲ್ಲಘಟ್ಟದಲ್ಲಿ ಈ 4,043 ಎಕರೆ 27 ಗುಂಟೆ ಜಮೀನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಈ ಅಧಿಸೂಚನೆ ಪ್ರಶ್ನಿಸಿ ಆರ್ ಶಂಕರನ್ ಸೇರಿದಂತೆ ಅನೇಕ ಭೂ ಮಾಲೀಕರು 2010ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭೂ ಸ್ವಾಧೀನಕ್ಕೆ ಗುರುತಿಸಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ ಮತ್ತು ಅಲ್ಲಿಯೇ ಮನೆಕಟ್ಟಿಕೊಂಡು ವಾಸವಾಗಿದ್ದೇವೆ. ಹೈನುಗಾರಿಕೆಯಲ್ಲಿ ತೊಡಗಿದ್ದೇವೆ. ನರ್ಸರಿ ನಡೆಸಲಾಗುತ್ತಿದೆ. ಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಸಣ್ಣ ಇಟ್ಟಿಗೆ ತಯಾರಿಕೆ ಕಾರ್ಖಾನೆ ಸ್ಥಾಪಿಸಿದ್ದೇವೆ. ಜಮೀನಿನ ಮೇಲೆ ನಮ್ಮ ಜೀವನ ಆಧರಿಸಿದೆ. ಹೀಗಾಗಿ, ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಕೋರಿದ್ದರು.
ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಲಾಗಿದೆ.
ಬಿಡಿಎ ಪರವಾಗಿ ಹಿರಿಯ ವಕೀಲ ಗುರುದಾಸ್ ಕಣ್ಣೂರು, ಬಿ.ವಚನ್, ಮುರುಗೇಶ್ ವಿ.ಚರಾಟಿ, ಕೆ.ಕೃಷ್ಣ, ಜಿ.ಲಕ್ಷ್ಮೀಶ ರಾವ್, ಗೌತಮ ಉಲ್ಲಾಳ್ ಮತ್ತು ಅಜಯಕುಮಾರ್ ಅವರ ತಂಡ ವಾದಸಿತ್ತು.