ಮನೆ ರಾಜ್ಯ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ನಿರ್ಣಯ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ: ವಿಧಾನಸಭೆಯ...

ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ನಿರ್ಣಯ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ

0

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬಂದಿದ್ದು, ಈ ಕುರಿತು ಅಭಿನಂದನೆ ಸಲ್ಲಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಬಿಜೆಪಿ ವತಿಯಿಂದ ನಿರ್ಣಯ ಮಂಡನೆಯಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ. ರೈಲ್ವೆ, ಗ್ರಾಮೀಣಾಭಿವೃದ್ಧಿ, ವಿಮಾನ ನಿಲ್ದಾಣ, ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉತ್ತಮ ಅನುದಾನ ನೀಡಿದೆ. ಇದಕ್ಕಾಗಿ ಅಭಿನಂದನೆ ಸಲ್ಲಿಸಿ ನಿರ್ಣಯ ಮಂಡಿಸಲಾಗಿದೆ. ಸಂಸದ ಡಿ.ಕೆ.ಸುರೇಶ್‌ ಅವರು ದೇಶ ಒಡೆಯುವ ಮಾತನಾಡಿದ್ದು, ಅದನ್ನು ಮರೆಸಲು ರಾಜ್ಯ ಸರ್ಕಾರದಿಂದ ನಿರ್ಣಯ ಮಂಡಿಸಲಾಗಿದೆ. ಇಡೀ ದೇಶದಲ್ಲಿ ಖಂಡನೆ ಕೇಳಿಬಂದ ನಂತರ ಈ ನಾಟಕವಾಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ನೀಡಿದ ಸಹಕಾರದ ಬಗ್ಗೆ ಬಿಜೆಪಿ ಮಂಡಿಸಿದ ನಿರ್ಣಯದಲ್ಲಿ ತಿಳಿಸಲಾಗಿದೆ ಎಂದರು.

ದೇಶದಲ್ಲಿ ಎರಡು ಧ್ವಜ ಹಾರಿಸಲು ಕಾಂಗ್ರೆಸ್‌ ಅನುಮತಿ ನೀಡಿತ್ತು. ದೇಶ ಮೊದಲು ಪಕ್ಷ ನಂತರ ಎಂದು ಬಿಜೆಪಿ ಹೇಳಿದರೆ, ದೇಶ ನಂತರ ಸೋನಿಯಾ ಮೊದಲು ಎನ್ನುವುದು ಕಾಂಗ್ರೆಸ್‌ನ ಧೋರಣೆ. ಕುತಂತ್ರ ಮಾಡಿ ನಿರ್ಣಯ ಕೈಗೊಂಡಿದ್ದು, ಅದನ್ನು ಹಿಂಪಡೆಯಲು ಧರಣಿ ಮಾಡಿದ್ದೇವೆ. ಕೇಂದ್ರ-ರಾಜ್ಯ ಸರ್ಕಾರಗಳು ಜೋಡೆತ್ತಿನಂತೆ ಸಾಗಬೇಕು ಎಂದರು.

ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಕಾರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂಹಕಾರದಿಂದ ಮಾತನಾಡಿರುವುದು ಜನತೆಗೆ ಮಾಡಿದ ಅಪಮಾನ ಎಂದರು.

ಬಿ.ಕೆ.ಹರಿಪ್ರಸಾದ್‌ ಅವರು ಸಚಿವರಾಗದಿರುವುದರಿಂದ ಈಗ ಸರ್ಕಾರದ ತಪ್ಪುಗಳನ್ನು ಹೇಳುತ್ತಿದ್ದಾರೆ. ಅಯೋಧ್ಯೆಗೆ ಹೋಗುತ್ತಿರುವ ರೈಲಿಗೆ ಮುಸ್ಲಿಮರು ಬೆದರಿಕೆ ಹಾಕುತ್ತಾರೆ ಎಂದರೆ ಅದಕ್ಕೆ ಕಾಂಗ್ರೆಸ್‌ ಕಾರಣವಾಗುತ್ತದೆ. ಇಲ್ಲಿ ಮುಸ್ಲಿಂ ಸಂಘಟನೆಗಳಿಗೆ ಕಾಂಗ್ರೆಸ್‌ ಸರ್ಕಾರ ಕುಮ್ಮಕ್ಕು ನೀಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಈಗಾಗಲೇ ಹೇಳಿದ್ದೇನೆ ಎಂದರು.

ತಮಿಳುನಾಡಿನ ಸಚಿವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಆತ್ಮೀಯ ಸ್ನೇಹಿತರು. ಅವರ ಪಕ್ಷದವರು ಪಾರ್ಟ್‌ನರ್‌ ಆಗಿರುವುದರಿಂದ ಅಲ್ಲಿ ಹೋಗಿ ಮಾತನಾಡಲಿ. ನಮ್ಮ ನೀರು ನಮ್ಮ ಹಕ್ಕು ಎನ್ನುವುದು ಬೋಗಸ್‌ ನಾಟಕ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದರು.

ನಿರ್ಣಯದಲ್ಲಿರುವ ಅಂಶ

ಭಾರತ ಪ್ರಜಾಸತ್ತಾತ್ಮಕ ದೇಶವಾಗಿ 75 ವರ್ಷ ಕಳೆದಿದೆ. ಈ ಪೈಕಿ ಹೆಚ್ಚು ವರ್ಷ ಆಡಳಿತ ಮಾಡಿರುವುದು ಕಾಂಗ್ರೆಸ್. ಹಲವಾರು ವರ್ಷ ರಾಜ್ಯಗಳ ತೆರಿಗೆ ಪಾಲು ಕೇವಲ 20% ರಷ್ಟು ಇದ್ದು, 30% ಕ್ಕೆ ಹೆಚ್ಚಿಸಲು ಸುದೀರ್ಘ ಹೋರಾಟವನ್ನು ರಾಜ್ಯ ಮಾಡಬೇಕಾಯಿತು. 30% ರಿಂದ ಶೇ 40% ಏರಿಕೆ ಮಾಡುವ ಬೇಡಿಕೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಲು ನಿರಾಕರಿಸಿತ್ತು. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಪಾಲು ಕೊಡದ ಯುಪಿಎ ಸರ್ಕಾರದ ವಿರುದ್ಧ ಚಕಾರ ಎತ್ತದ ರಾಜ್ಯ ಕಾಂಗ್ರೆಸ್ ಕೇವಲ ರಾಜಕಾರಣಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೋ ಆಪರೇಟಿವ್ ಫೆಡರಲಿಸಂ ಎಂಬ ನೀತಿಯಿಂದ ರಾಜ್ಯಕ್ಕೆ ತೆರಿಗೆ ಪಾಲು ಕೊಡುವ ಬಹಳ ದಿನಗಳ ಬೇಡಿಕೆ 32% ರಿಂದ 42% ಏರಿಸಿರುವುದು ಎನ್‌ಡಿಎ ಸರ್ಕಾರದ ಕಾಳಜಿ ತೋರಿಸುತ್ತದೆ.

ಸಂವಿಧಾನದ ಅಡಿಯಲ್ಲಿ ರಚನೆಯಾಗಿರುವ ಹಣಕಾಸು ಆಯೋಗಗಳ ಶಿಫಾರಸ್ಸಿನಂತೆ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಬೇಕಾಗುತ್ತದೆ. ಅದನ್ನು ಕೆಂದ್ರದ ಎನ್‌ಡಿಎ ಸರ್ಕಾರ ಚಾಚೂತಪ್ಪದೆ ಪಾಲಿಸಿದೆ. ರಾಜ್ಯ ಸರ್ಕಾರದ ತಾರತಮ್ಯದ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ.

15 ನೇ ಹಣಕಾಸಿನ ಕಾರ್ಯ ಪ್ರಾರಂಭಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ರಾಜ್ಯ ಸರ್ಕಾರದ ವಸ್ತು ಸ್ಥಿತಿಗತಿಗಳನ್ನು ಆಯೋಗಕ್ಕೆ ಮನದಟ್ಟು ಮಾಡಿಕೊಡಲು ವಿಫಲವಾಗಿದೆ. ಅದಲ್ಲದೇ ಆಯೋಗದ ನಿರ್ಣಾಯಕ ಅಂತಿಮ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್ ನ ಐದು ಜನ ಸಚಿವರು ಭಾಗವಹಿಸಿದ್ದು ಆ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಮೌನ ವಹಿಸಿದ್ದು ಮತ್ತು ಆಯೋಗದ ಹಂಚಿಕೆಯಂತೆ ಹಣಕಾಸು ಹಂಚಿಕೆ ಕಾರ್ಯ ಆರಂಭವಾಗಿ ಎರಡು ವರ್ಷಗಳ ಮೇಲಾಗಿದೆ. ಏನಾದರೂ ಮಾನದಂಡದಲ್ಲಿ ವ್ಯತ್ಯಾಸವಾಗಿ ಅನುದಾನ ಕಡಿತವಾಗಿದ್ದರೆ ಅದಕ್ಕೆ ಆವತ್ತಿನ ಕಾಂಗ್ರೆಸ್ ಸರ್ಕಾರವೇ ಕಾರಣ.

ಒಂದು ದೇಶ ಒಂದು ತೆರಿಗೆ ಜಿಎಸ್‌ಟಿ ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಕಾನೂನು. ಅದರಲ್ಲಿ ಐದು ವರ್ಷ ರಾಜ್ಯದ ಆರ್ಥಿಕತೆ 14% ರಷ್ಟು ಬೆಳವಣಿಗೆ ಆಧರಿಸಿ ಐದು ವರ್ಷ ತೆರಿಗೆಯ ಪರಿಹಾರ ನಿಗದಿ ಪಡಿಸಲಾಗುವುದು. ಅದರಂತೆ 14% ಆರ್ಥಿಕ ಬೆಳವಣಿಗೆ ಅನುಸಾರ 1,06,258 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದೆ. ಇದು 2022 ಕ್ಕೆ ಅಂತಿಮಗೊಂಡಿದ್ದರೂ ರಾಜ್ಯ ಸರ್ಕಾರ 2023-24 ನ್ನು ಸೇರಿಸಿ ಸುಳ್ಳು ಲೆಕ್ಕಾಚಾರವನ್ನು ರಾಜ್ಯದ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ.

ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನವನ್ನು ನೇರವಾಗಿ ಹಲವು ಕಾರ್ಯಕ್ರಮಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೀಡುವ ವ್ಯವಸ್ಥೆ‌ಯನ್ನು ಕೇಂದ್ರ ಅನುಸರಿಸಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಹಾಯಧನ ಕಡಿತಗೊಂಡಿದೆ ಎಂಬ ಇನ್ನೊಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ.

ಸೆಸ್ ಮತ್ತು ಸರ್‌ಚಾರ್ಜ್‌ಗಳು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಕಾಲದಿಂದಲೂ ಇವೆ. ಕೆಲವು ನಿರ್ದಿಷ್ಟ ‌ಕಾರ್ಯಕ್ರಮಕ್ಕಾಗಿ ಈ ತೆರಿಗೆ ಹಾಕುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ನಮ್ಮ ರಾಜ್ಯಕ್ಕೆ 1,06,258 ಕೋಟಿ ರೂ. ಜಿಎಸ್‌ಟಿ ಪರಿಹಾರಗಳು ಇಂತಹ ಸರ್‌ಚಾರ್ಜ್ ಮತ್ತು ಸೆಸ್ ಮೂಲಕ ಬಂದಿದೆ. ಈ ಸತ್ಯವನ್ನು ಮರೆಮಾಚಿ ರಾಜ್ಯಕ್ಕೆ ಇನ್ನಷ್ಟು ಪಾಲು ಬರಬೇಕು ಎಂಬ ಬೇಡಿಕೆ ರಾಜಕೀಯ ಪ್ರೇರಿತವಾಗಿದೆ.

ಜಿಎಸ್‌ಟಿಯನ್ನು ಮೊದಲು ರಾಷ್ಟ್ರದಲ್ಲಿ ಪ್ರಸ್ತಾಪಿಸಿರುವುದು ಕಾಂಗ್ರೆಸ್ ಸರ್ಕಾರ. ಅದರಲ್ಲಿ ಹಲವಾರು ಮಾರ್ಪಾಡು ಮಾಡಿ ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಅಳವಡಿಸಿ ಸಮರ್ಥವಾಗಿ ಜಾರಿಗೆ ತಂದಿದೆ. ಇದರಿಂದ ರಾಜ್ಯಗಳ ತೆರಿಗೆ ಸಂಗ್ರಹ ಹೆಚ್ಚಾಗಿರುವುದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ. ಹಾಗೂ 14% ಆರ್ಥಿಕ ಬೆಳವಣಿಗೆ ಆಗದಿದ್ದರೂ ಕೂಡ ತೆರಿಗೆ ಪರಿಹಾರ 14% ರಷ್ಟು ಕೊಡುವ ಮುಖಾಂತರ ರಾಜ್ಯಗಳಲ್ಲಿ ಸ್ಥಿರವಾದ ಆರ್ಥಿಕತೆ ತರಲು ಸಹಾಯವಾಗಿದೆ. ಕಾಲ್ಪನಿಕವಾಗಿ ಹಾಗೂ ಅವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿ ಬಹಳ ದೊಡ್ಡ ಪ್ರಮಾಣದ ನಷ್ಟ ರಾಜ್ಯಕ್ಕೆ ಆಗಿದೆ ಎಂದು ಹೇಳುವುದು ಹಾಗೂ ಕೇಂದ್ರವನ್ನು ದೂಷಿಸುವುದು ರಾಜಕಾರಣದಲ್ಲಿ ಅತಿ ದೊಡ್ಡ ಸುಳ್ಳಾಗಿದೆ.

ಕರ್ನಾಟಕದಲ್ಲಿ ಅಭಿವೃದ್ಧಿ ಮತ್ತು ಕರ್ನಾಟಕದ ಪಾಲನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಾವೆಲ್ಲರೂ ಬದ್ಧತೆ ತೋರಿಸಬೇಕು. ಆದರೆ ಸುಳ್ಳು, ಕಾಲ್ಪನಿಕ ಮತ್ತು ರಾಜಕೀಯ ಪ್ರೇರಣೆಯ ವಿಚಾರ, ವಾದ, ನಿರ್ಣಯಗಳನ್ನು ಖಂಡಿಸಲೇಬೇಕು. ನಾವು ನಿನ್ನೆ ರಾಜ್ಯ ಸರ್ಕಾರ ತಂದ ಆರ್ಥಿಕತೆಯ ಬಗ್ಗೆ ನಿರ್ಣಯವನ್ನು ಖಂಡಿಸುತ್ತೇವೆ. ಅದಲ್ಲದೇ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹ, ಹಂಚಿಕೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಅದನ್ನು ಮರೆಮಾಚಲು ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈ ಬಿಡಬೇಕೆಂದು ಒತ್ತಾಯ ಮಾಡುತ್ತೇವೆ.